ಮಧ್ಯಪ್ರದೇಶ, ಮಾ 03 (DaijiworldNews/DB): ಮೊಬೈಲ್ ಫೋನ್ನ್ನು ಚಾರ್ಜ್ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಫೋನ್ ಸ್ಪೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದಯಾರಾಮ್ ಬರೋದ್ (68) ಮೃತ ದುರ್ದೈವಿ. ಪತ್ನಿ ಸಾವನ್ನಪ್ಪಿದ ಬಳಿಕ ಬದ್ನಗರ ತೆಹಸಿಲ್ನ ರುನಿಜಾ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು, ಮೊಬೈಲ್ನ್ನು ಚಾರ್ಜ್ಗೆ ಇರಿಸಿ ತನ್ನ ಸ್ನೇಹಿತನೊಂದಿಗೆ ಅದೇ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮೊಬೈಲ್ ಫೋನ್ ಬಿಸಿಯಾಗಿ ಬ್ಯಾಟರಿಗೆ ಹಾನಿಯಾಗಿ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ವ್ಯಕ್ತಿಯ ತಲೆ, ಮುಖ, ಎದೆಗೆ ಗಂಭೀರ ಗಾಯಗಳಾಗಿದ್ದು, ಆತ ಸಾವನ್ನಪ್ಪಿದ್ದಾರೆ.
ಮೊಬೈಲ್ ಫೋನ್ ಬೀಳುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಬ್ಯಾಟರಿಯಲ್ಲಿ ಸೋರಿಕೆ ಉಂಟಾಗುತ್ತದೆ. ಇದರಿಂದ ಚಾರ್ಜ್ಗೆ ಇರಿಸಿದಾಗ ಅದರಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂಭವ ಇರುತ್ತದೆ. ಬ್ಯಾಟರಿ ಹಳೆಯದಾದಂತೆ ಊದಿಕೊಂಡು ಶಾರ್ಟ್ ಸರ್ಕ್ಯೂಟ್ ಆಗಿ ಸ್ಪೋಟಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಚಾರ್ಜ್ಗೆ ಇರಿಸಿಕೊಂಡು ಮೊಬೈಲ್ನಲ್ಲಿ ಮಾತನಾಡಬಾರದು ಎಂಬುದಾಗಿ ಆಗಾಗ ವೈದ್ಯರು ಸಹಿತ ಹಲವರು ಸಲಹೆ ನಿಡುತ್ತಲೇ ಇರುತ್ತಾರೆ.