ಬೆಂಗಳೂರು, ಮಾ 03 (DaijiworldNews/DB): ಬಿಜೆಪಿ ಶಾಸಕರೊಬ್ಬರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ 6 ಕೋಟಿ ರೂ. ನಗದು ಪತ್ತೆಯಾಗಿದೆ.
ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಅವರ ಮೇಲೆ ಗುರುವಾರ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾಳಿ ನಡೆಸಿದ್ದು, ಗುತ್ತಿಗೆದಾರರೊಬ್ಬರಿಂದ 40 ಲಕ್ಷ ರೂ. ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಬಳಿಕ ಅವರ ಮನೆ ಮೇಲೆಯೂ ಅಧಿಕಾರಿಗಳು ಧಾಳಿ ನಡೆಸಿದ್ದು, ಈ ವೇಳೆ ಆರು ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಗುತ್ತಿಗೆದಾರರೊಬ್ಬರಿಂದ ಪ್ರಶಾಂತ್ ಅವರು 80 ಲಕ್ಷ ರೂ.ಗಳಿಗೂ ಅಧಿಕ ಹಣದ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 40 ಲಕ್ಷ ರೂ. ಗಳನ್ನು ಪಡೆದುಕೊಳ್ಳುತ್ತಿರುವ ವೇಳೆಯೇ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಅಧ್ಯಕ್ಷರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯೂಎಸ್ಎಸ್ ಬಿ) ಮುಖ್ಯ ಅಕೌಂಟೆಂಟ್ ಆಗಿದ್ದಾರೆ.