ನವದೆಹಲಿ, ಮಾ 03 (DaijiworldNews/DB): ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶದ ಮಾದರಿಯಲ್ಲಿ ಎಡಪಕ್ಷದ ಆಡಳಿತವಿರುವ ಕೇರಳದಲ್ಲಿಯೂ ಮುಂದಿನ ದಿನಗಳಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಬಿಜೆಪಿ ಮೈತ್ರಿ ಸರ್ಕಾರ ಕೇರಳದಲ್ಲಿ ರಚನೆ ಖಂಡಿತಾ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಕೇರಳವನ್ನು ಲೂಟಿಗೈಯಲು ಕಾರಣವಾಗುತ್ತಿವೆ. ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ನಾವು ಹೇಗೆ ಸರ್ಕಾರ ರಚಿಸುತ್ತೇವೆಯೋ ಅದೇ ರೀತಿ ಕೇರಳದಲ್ಲಿಯೂ ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಸಣ್ಣ ರಾಜ್ಯಗಳ ಬಗ್ಗೆ ಕಾಂಗ್ರೆಸ್ ತೀರಾ ಅಸಡ್ಡೆ ತೋರುತ್ತಿದೆ. ದ್ವೇಷ ಸಾಧಿಸಿರುವುದೂ ಈಗ ಗೊತ್ತಾಗಿದೆ. ಫಲಿತಾಂಶವನ್ನು ಅದೇನು ದೊಡ್ಡ ವಿಷಯವಲ್ಲ ಎಂದು ಹೇಳುತ್ತಾರೆ. ಆದರೆ ಈ ಅಸಡ್ಡೆ ಜನರಿಗೂ ಅರಿವಿದೆ ಎಂದು ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಸರ್ಕಾರ ಮಾಡಿದ ಅಭಿವೃದ್ದಿ ಕೆಲಸ, ಕೆಲಸದಲ್ಲಿ ರೂಢಿಸಿಕೊಂಡ ಸಂಸ್ಕೃತಿ, ಕಾರ್ಯಕರ್ತರ ಸಮರ್ಪಣೆಯಿಂದಾಗಿ ಈ ಫಲಿತಾಂಶ ಸಿಗಲು ಸಾಧ್ಯವಾಗಿದೆ. ಏಳು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಈಶಾನ್ಯ ರಾಜ್ಯಗಳಿಗೆ ’ಹಿರಾ” (ಹೆದ್ದಾರಿ, ಇಂಟರ್ನೆಟ್, ರೈಲು ಮತ್ತು ವಿಮಾನ ನಿಲ್ದಾಣ) ಮಂತ್ರದ ಮೂಲಕ ಸಂಪರ್ಕ ಕಲ್ಪಿಸುವಲ್ಲಿ ಬಿಜೆಪಿ ಸರ್ಕಾರ ತೊಡಗಿಸಿಕೊಂಡಿದೆ. ಆ ಮೂಲಕ ಆ ರಾಜ್ಯಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗುತ್ತಿದೆ ಎಂದರು.