ಬೆಂಗಳೂರು, ಮಾ 03 (DaijiworldNews/DB): ಭ್ರಷ್ಟಾಚಾರವನ್ನು ತಡೆಯುವುದಕ್ಕೆಂದೇ ನಾವು ಲೋಕಾಯುಕ್ತವನ್ನು ಮರು ಸ್ಥಾಪಿಸಿರುವುದು. ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ನಿವಾಸದ ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರವೇ ಅವರಿಗೆ ಶಿಕ್ಷೆಯಾಗಲಿದೆ ಎಂದರು.
ಲೋಕಾಯುಕ್ತ ಇಲ್ಲದೇ ಇದ್ದುದರಿಂದ ಕಾಂಗ್ರೆಸ್ ಆಡಳಿತಾವಧಿಯಲ್ಲಿನ ಪ್ರಕರಣಗಳೆಲ್ಲಾ ಹಿಂದೆ ಮುಚ್ಚಿ ಹೋಗಿತ್ತು. ಆದರೆ ನಾವು ಆ ಸಂಸ್ಥೆಯನ್ನು ಮರು ಸ್ಥಾಪಿಸಿದ್ದೇವೆ. ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಸಂಪೂರ್ಣ ಅಧಿಕಾರವನ್ನು ಅವರಿಗೆ ನೀಡಿದ್ದೇವೆ ಎಂದರು.
ಎಸಿಬಿ ರಚಿಸಿ ಲೋಕಾಯುಕ್ತದ ಹಲ್ಲು ಕೀಳುವ ಕೆಲಸ ಮಾಡಿದ್ದು ಕಾಂಗ್ರೆಸ್. ಆದರೆ ಭ್ರಷ್ಟಾಚಾರದ ನಿಗ್ರಹಕ್ಕೆಂದೇ ನಾವು ಆ ಸಂಸ್ಥೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದೇವೆ. ತಪ್ಪು ಮಾಡಿದವರು ಯಾರೇ ಆದರೂ ಶಿಕ್ಷೆ ಖಂಡಿತಾ. ಕಾಂಗ್ರೆಸ್ ಅವಧಿಯಲ್ಲಿ ಎಸಿಬಿ ರಚಿಸಿ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಅವರಿಗೆ ಬಿಜೆಪಿ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂದರು.