ನವದೆಹಲಿ, ಮಾ 03 (DaijiworldNews/DB): ತಮ್ಮನ್ನು ಪಲಾಯನಗೊಂಡ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಣೆ ಮಾಡುವುದು ಮತ್ತು ಆಸ್ತಿ ಜಪ್ತಿ ವಿಚಾರವಾಗಿ ಮುಂಬೈ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಒಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಅರ್ಜಿ ಕುರಿತು ವಾದ ಮಂಡನೆ ಬಗ್ಗೆ ಅರ್ಜಿದಾರರು ಯಾವುದೇ ಸೂಚನೆ ನೀಡಿಲ್ಲ ಎಂದು ಮಲ್ಯ ಪರ ವಕೀಲರು ಹೇಳಿದ ಬೆನ್ನಲ್ಲೇ ಅರ್ಜಿಯನ್ನು ವಜಾ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯವರು ಪಲಾಯನಗೊಂಡಿರುವ ಆರ್ಥಿಕ ಅಪರಾಧಿ ಎಂಬುದಾಗಿ ಮಲ್ಯ ಅವರನ್ನು ಘೋಷಣೆ ಮಾಡಬೇಕು ಎಂದು ಕೋರಿತ್ತು. ಅದರಂತೆ 2019ರ ಜನವರಿ 5ರಂದು ಮುಂಬೈ ಕೋರ್ಟ್ ಈ ಘೋಷಣೆ ಮಾಡಿತ್ತು. ಕಾಯ್ದೆ ಪ್ರಕಾರ ಒಮ್ಮೆ ವ್ಯಕ್ತಿಯನ್ನು ಈ ರೀತಿಯಾಗಿ ಘೋಷಿಸಿದ್ದಲ್ಲಿ ಆ ವ್ಯಕ್ತಿಯ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರ ತನಿಖಾ ಸಂಸ್ಥೆಗೆ ಇರುತ್ತದೆ ಎಂದು ವರದಿಯಾಗಿದೆ.