ಪಾಟ್ನಾ, ಮಾ 03 (DaijiworldNews/DB): ಜೋರಾದ ಡಿಜೆ ಸೌಂಡ್ನಿಂದಾಗಿ ಮದುವೆ ಮಂಟಪದಲ್ಲೇ ವರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಸುರೇಂದ್ರಕುಮಾರ್ ಮೃತ ಮದುಮಗ. ಮದುಮಕ್ಕಳು ಮಂಟಪದಲ್ಲಿ ಹಾರ ಬದಲಾಯಿಸಿಕೊಳ್ಳುವ ವೇಳೆ ಜೋರಾಗಿ ಡಿಜೆ ಶಬ್ದ ಹಾಕಲಾಗಿತ್ತು. ಕೂಡಲೇ ಡಿಜೆ ಶಬ್ದವನ್ನು ಕಡಿಮೆ ಮಾಡುವಂತೆ ಸುರೇಂದ್ರಕುಮಾರ್ ಸಂಬಂಧಪಟ್ಟವರಿಗೆ ಹೇಳಿದ್ದಾರೆ. ಆದರೆ ಯಾರೂ ಕೂಡಾ ಡಿಜೆ ಶಬ್ದವನ್ನು ಕಡಿಮೆ ಮಾಡಿರಲಿಲ್ಲ. ಅತಿಯಾದ ಶಬ್ದದಿಂದಾಗಿ ಮಂಟಪದಲ್ಲಿ ವಧುವಿನ ಎದುರಲ್ಲೇ ಅವರು ಕುಸಿದು ಬಿದ್ದಿದ್ದಾರೆ.
ತತ್ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಡಿಜೆ ಶಬ್ದದಿಂದಾಗಿ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನಲಾಗಿದೆ.