ದಾವಣಗೆರೆ, ಮಾ 04 (DaijiworldNews/MS): ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳಲಾರಂಭಿಸಿದೆ. ಇನ್ನು ಬೆಣ್ಣೆ ನಗರಿ ದಾವಣಗೆರೆಯಿಂದ ಚುನಾವಣಾ ಪ್ರಚಾರ ಶುರು ಮಾಡಲು ಆಮ್ ಆದ್ಮಿ ಪಕ್ಷದ ಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಖಾಡಕ್ಕೆ ಇಳಿದಿದ್ದಾರೆ.
ರಾಜ್ಯದಲ್ಲಿ ಆಮ್ ಆದ್ಮಿಗೆ ನೆಲೆ ಕಲ್ಪಿಸಲು ದಾವಣಗೆರೆ ಆಯ್ಕೆ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ಇಂದು ಬೆಣ್ಣೆ ನಗರಿಗೆ ಆಗಮಿಸಲಿದ್ದಾರೆ.ದಾವಣಗೆರೆ ನಗರದ ಸರ್ಕಾರ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಲಿರುವ ಸಮಾವೇಶದಲ್ಲಿ 25,000 ಸ್ವಯಂಸೇವಕರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ನಂತರ ಕೇಜ್ರಿವಾಲ್ ಮತ್ತು ಮಾನ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಎಎಪಿ ತನ್ನ ದಾವಣಗೆರೆ ಸಮಾವೇಶದಿಂದ ವಿಧಾನಸಭೆ ಚುನಾವಣೆಗೆ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಖಾತೆ ತೆರೆಯಲೇಬೇಕು ಎಂಬ ಮಹಾದಾಸೆಯನ್ನು ಆಮ್ ಆದ್ಮಿ ಪಕ್ಷ ಹೊಂದಿದೆ.