ನವದೆಹಲಿ, ಮಾ 04 (DaijiworldNews/DB): ನದಿ ನೀರಿನ ಮೇಲೆ, ರಸ್ತೆ ಸೇರಿದಂತೆ ಹೊಲಗದ್ದೆಗಳ ಮೇಲೆಯೂ ಹಾರಾಡಬಹುದಾದ ಬ್ರಿಟಿಷ್ ಕಂಪೆನಿ ಅಭಿವೃದ್ದಿಪಡಿಸಿದ ಜೆಟ್ಪ್ಯಾಕ್ ಸೂಟ್ಗಳ ಖರೀದಿಗೆ ಭಾರತೀಯ ಸೇನೆ ಮುಂದಾಗಿದೆ.
ಚೀನಾ ಗಡಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸೈನಿಕರು ಹೆಚ್ಚಿನ ಕಣ್ಗಾವಲು ಇರಿಸಬೇಕಾಗುತ್ತದೆ. ಯುದ್ದತಂತ್ರದಲ್ಲಿ ವಿನೂತನ ಬದಲಾವಣೆಗಳೂ ಅಗತ್ಯವಾಗಿರುತ್ತದೆ. ಹೀಗಾಗಿ ಯುದ್ದತಂತ್ರದ ಚಲನಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೈನಿಕರಿಗೆ ಜೆಟ್ಪ್ಯಾಕ್ಗಳನ್ನು ನೀಡಲು ಭಾರತೀಯ ಸೇನೆ ಮುಂದಾಗಿದೆ.
ಇದಕ್ಕಾಗಿ ಗ್ರಾವಿಟಿ ಇಂಡಸ್ಟ್ರೀಸ್ ಎಂಬ ಬ್ರಿಟಿಷ್ ಕಂಪೆನಿಯೊಂದು ಅಭಿವೃದ್ದಿಪಡಿಸಿದ ಜೆಟ್ಪ್ಯಾಕ್ ಸೂಟ್ಗಳನ್ನು ಸೇನೆ ಖರೀದಿ ಮಾಡುತ್ತಿದೆ. ಈ ಸೂಟ್ ಧರಿಸಿದರೆ ನದಿ ನೀರಿನ ಮೇಲೆ, ರಸ್ತೆಗಳ ಮೇಲೆ, ಗದ್ದೆ, ಹೊಲಗಳ ಮೇಲೆ ಹಾರಾಡುವುದು ಸುಲಭವಾಗುತ್ತದೆ. ಆರಂಭದಲ್ಲಿ 48 ಜೆಟ್ಪ್ಯಾಕ್ ಸೂಟ್ಗಳ ಖರೀದಿ ಮಾಡಲಾಗುತ್ತದೆ. ಇನ್ನು ಗ್ರಾವಿಟಿ ಇಂಡಸ್ಟ್ರೀಸ್ ಸಂಸ್ಥಾಪಕ ರಿಚರ್ಡ್ ಬ್ರೌನಿಂಗ್ ಅವರು ಆಗ್ರಾದಲ್ಲಿ ಈ ಸೂಟ್ ಧರಿಸಿ ಡೆಮೋ ಕೂಡಾ ನೀಡಿದ್ದಾರೆ.