ವಿಜಯಪುರ, ಮಾ 04 (DaijiworldNews/MS): ಇಲ್ಲಿನ ಕೊಲ್ಹಾರ ಪಟ್ಟಣದ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿ ಸೇತುವೆ ಮೇಲೆ ಶನಿವಾರ ಬೆಳಿಗ್ಗೆ ಬಾಯಿಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ದೊಡ್ಡ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿದ್ದು, ಬೇಸಿಗೆ ಸಂದರ್ಭದಲ್ಲಿ ತಾಪಮಾನ ತಾಳದೇ ನದಿ ತೀರದಲ್ಲಿ ಕಾಣಿಸಿಕೊಳ್ಳುತ್ತವೆ. ಜನವಸತಿ ಪ್ರದೇಶಕ್ಕೂ ನುಗ್ಗುತ್ತವೆ. ಇದೇ ರೀತಿ ಜನವಸತಿ ಪ್ರದೇಶಕ್ಕೆ ನುಗ್ಗಿರುವಾಗ ಹಿಡಿದು ಹಗ್ಗ ಕಟ್ಟಿ ತಂದು ಇಲ್ಲಿ ಬಿಟ್ಟಿರಬಹುದು? ಈ ವೇಳೆ ತಪ್ಪಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳೀಯ ಯುವಕರ ಸಹಾಯದಿಂದ ಮೊಸಳೆಯನ್ನು ಹಗ್ಗದಿಂದ ರಸ್ತೆ ಬದಿಗೆ ಸರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮೊಸಳೆ ರಕ್ಷಿಸಿ ನದಿಗೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.