ನವದೆಹಲಿ, ಮಾ 04 (DaijiworldNews/DB): ಜ್ವರ, ಕೆಮ್ಮು, ಶೀತದಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಔಷಧಕ್ಕಾಗಿ ರೋಗಿಗಳು ಬಂದ ವೇಳೆ ಆ್ಯಂಟಿ ಬಯೋಟಿಕ್ಗಳನ್ನು ಶಿಫಾರಸ್ಸು ಮಾಡುವುದನ್ನು ತಪ್ಪಿಸಲು ವೈದ್ಯರುಗಳಿಗೆ ಭಾರತೀಯ ವೈದ್ಯಕೀಯ ಸಂಘವು ಶಿಫಾರಸ್ಸು ಮಾಡಿದೆ.
ಈ ಕುರಿತು ಐಎಂಎಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದು, ಸಾಂಕ್ರಾಮಿಕ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮಿಗೆ ಆ್ಯಂಟಿ ಬಯೋಟಿಕ್ ಶಿಫಾರಸ್ಸು ಮಾಡುವುದುನ್ನು ಆದಷ್ಟು ತಪ್ಪಿಸಬೇಕು. ಈ ಜ್ವರ ಔಷಧಿ ಇಲ್ಲದಿದ್ದರೂ ನಾಲ್ಕೈದು ದಿನಗಳಲ್ಲಿ ವಾಸಿಯಾಗುತ್ತದೆ. ಕೆಮ್ಮು ಮೂರು ವಾರಗಳವರೆಗೂ ಮುಂದುವರಿಯಬಹುದು. ಆ ಬಳಿಕ ತನ್ನಷ್ಟಕ್ಕೇ ವಾಸಿಯಾಗುತ್ತದೆ. ಹೀಗಾಗಿ ಆ್ಯಂಟಿ ಬಯೋಟಿಕ್ ನೀಡದಿರುವುದೇ ಉತ್ತಮ ಎಂದು ಸಲಹೆ ಮಾಡಿದೆ.
ಈ ಸಾಂಕ್ರಾಮಿಕ ಕಾಯಿಲೆಗಳು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರು ಹಾಗೂ 15 ವರ್ಷ ಒಳಗಿನವರಿಗೆ ಕಾಣಿಸಿಕೊಳ್ಳುತ್ತಿದೆ. ಇನ್ನು ಒಂದು ವೇಳೆ ಜ್ವರ, ಶೀತ, ಕೆಮ್ಮು ತೀವ್ರವಾಗಿದ್ದರೆ ಅಥವಾ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಯಾರೂ ಕೂಡಾ ವೈದ್ಯರ ಸಲಹೆ ಇಲ್ಲದೆ ಸ್ವತಃ ಆ್ಯಂಟಿ ಬಯೋಟಿಕ್ಗಳನ್ನು ತೆಗೆದುಕೊಂಡು ಸೇವಿಸುವುದು ಸಲ್ಲ ಎಂದೂ ಐಎಂಎ ನಿರ್ದೇಶನ ನೀಡಿದೆ.