ಹೈದರಾಬಾದ್, ಮಾ 04 (DaijiworldNews/DB): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ದರೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬರೋಬ್ಬರಿ 300 ಕಿಡ್ನಿಸ್ಟೋನ್ಗಳನ್ನು ಹೊರ ತೆಗೆದಿದ್ದಾರೆ.
ಕರೀಂನಗರ ಜಿಲ್ಲೆಯ ನಿವಾಸಿ ರಾಮ್ ರೆಡ್ಡಿ (75) ಅವರು ಕೆಲವು ತಿಂಗಳುಗಳಿಂದ ಬೆನ್ನು ಮತ್ತು ಪಾರ್ಶ್ವ ಪ್ರದೇಶದಲ್ಲಿ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ತೆರಳಿದ್ದ ಅವರಿಗೆ ಅಲ್ಟ್ರಾಸೌಂಡ್ ಮತ್ತು ಕಂಪ್ಯೂಟರೀಕೃತ ಟೊಮೊಗ್ರಫಿ ಸ್ಕ್ಯಾನ್ಗಳನ್ನು ಮಾಡಿಸಲಾಗಿತ್ತು. ಈ ವೇಳೆ ಬಲ ಮೂತ್ರಪಿಂಡದಲ್ಲಿ 7 ಸೆಂ.ಮೀ.ಗಿಂತ ಹೆಚ್ಚಿನ ಗಾತ್ರದ ಬೃಹತ್ ಕಲ್ಲು ಪತ್ತೆಯಾಗಿದೆ. ಇದು 300ಕ್ಕೂ ಹೆಚ್ಚು ಕಲ್ಲುಗಳ ಸಂಯೋಜನೆ ಮೂಲಕ ರಚನೆಯಾಗಿತ್ತು ಎಂದು ಎಐಎನ್ ಯುನ ಕನ್ಸಲ್ಟೆಂಟ್ ಯುರಾಲಜಿಸ್ಟ್ ಡಾ. ಎಂ.ಡಿ.ತೈಫ್ ಬೆಂಡಿಗೇರಿ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ 7 ಸೆಂ.ಮೀ.ಗಿಂತ ಹೆಚ್ಚಿನ ಕಲ್ಲಿನ ತುಂಡುಗಳನ್ನು ತೆರವುಗೊಳಿಸಲು ಕೇವಲ 5 ಎಂಎಂ ಗಾತ್ರದ ಕೀ-ರಂಧ್ರದ ಮೂಲಕ ಸಾಗಿಸಲಾಯಿತು. ಎಲ್ಲಾ ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಎರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.
ಸಾಮಾನ್ಯವಾಗಿ ಕಿಡ್ನಿ ಕಲ್ಲು ರೋಗಿಗಳಲ್ಲಿ , 7 ಮಿ.ಮೀ.ನಿಂದ 15 ಮಿ.ಮೀ ಗಾತ್ರದ ಕಲ್ಲುಗಳು ಕಂಡು ಬರುತ್ತವೆ. ಆದರೆ ಇದೊಂದು ಅಪರೂಪದ ಪ್ರಕರಣವಾಗಿತ್ತು. ರೋಗಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ದೀರ್ಘ ಕಾಲದ ಕಾಯಿಲೆಗಳಿದ್ದಿದ್ದರಿಂದ ಕಿಡ್ನಿ ಕಲ್ಲಿನ ಸಮಸ್ಯೆ ಹೆಚ್ಚು ಸಂಕೀರ್ಣವಾಗಿತ್ತು. ಡಾ. ಮಲ್ಲಿಕಾರ್ಜುನ ಸಿ.ನೇತೃತ್ವದ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದರು.