ಚಿತ್ರದುರ್ಗ, ಮಾ 04 (DaijiworldNews/DB): ವಿಧಾನಸೌಧ ಮತ್ತು ವಿಕಾಸ ಸೌಧವನ್ನು ವ್ಯಾಪಾರ ಸೌಧವನ್ನಾಗಿ ಬದಲಾಯಿಸಿದ್ದು ಕಾಂಗ್ರೆಸ್ನವರು. ಎಲ್ಲರೂ ಸತ್ಯ ಹರಿಶ್ಚಂದ್ರರಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ವೈಯಕ್ತಿಕ. ಆದರೆ ಅದನ್ನು ಬಿಜೆಪಿ ಪಕ್ಷ ಮತ್ತು ಮುಖ್ಯಮಂತ್ರಿಯವರಿಗೆ ತಳುಕು ಹಾಕಿ ಮಾತನಾಡುವುದು ಸಲ್ಲ ಎಂದರು.
ಶಾಸಕರು ಹಾಗೂ ಸಚಿವರಿಗೆ ಸಿಎಂ ಟಾರ್ಗೆಟ್ ನೀಡಿದ್ದಾರೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಣ ನೀಡಿ ಎಂದು ಯಾರಿಗೂ ಸಿಎಂ ಹೇಳಿಲ್ಲ. ಯಾರಿಗೂ ಅಂತಹ ಟಾರ್ಗೆಟ್ಗಳನ್ನು ನೀಡಿಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಎಲ್ಲರೂ ಸತ್ಯ ಹರಿಶ್ಚಂದ್ರರೆಂದು ಹೇಳಲಾಗದು. ವಿಧಾನಸೌಧ ಮತ್ತು ವಿಕಾಸ ಸೌಧವನ್ನು ಕಾಂಗ್ರೆಸ್ನವರು ವ್ಯಾಪಾರ ಸೌಧವನ್ನಾಗಿ ಮಾಡಿದ್ದರು ಎಂದು ಆಪಾದಿಸಿದರು.
ಭ್ರಷ್ಟಾಚಾರದ ಮೂಲ ಕರ್ತೃಗಳೇ ಕಾಂಗ್ರೆಸ್ ನಾಯಕರು. ನಮ್ಮನ್ನು ದೂಷಿಸುವ ಯಾವುದೇ ನೈತಿಕತೆ ಅವರಿಗಿಲ್ಲ. ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ನೀಡುತ್ತದೆ. ಹಾಗಂದ ಮೇಲೆ ಅವರ ಪ್ರತಿಭಟನೆಗೆ ಅರ್ಥವೇನಿದೆ ಎಂದು ಪ್ರಶ್ನಿಸಿದರು.