ನವದೆಹಲಿ, ಮಾ 04 (DaijiworldNews/DB): ಇದು ಸುಳ್ಳು ಸುದ್ದಿಗಳ ಯುಗ. ಇಲ್ಲಿ ಸತ್ಯ ಬಲಿಪಶುವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅಮೇರಿಕನ್ ಬಾರ್ ಅಸೋಸಿಯೇಷನ್ ಇಂಡಿಯಾ ಕಾನ್ಫರೆನ್ಸ್ 2023 ರಲ್ಲಿ "ಜಾಗತೀಕರಣದ ಯುಗದಲ್ಲಿ ಕಾನೂನು: ಭಾರತ ಮತ್ತು ಪಶ್ಚಿಮದ ಒಮ್ಮುಖ" ವಿಷಯದ ಕುರಿತು ಮಾತನಾಡಿದ ಅವರು, ತಾಳ್ಮೆ ಮತ್ತು ಸಹಿಷ್ಣುತೆ ಎಂಬುದೇ ಜನರಲ್ಲಿ ಇಲ್ಲದಾಗಿದೆ. ಸುಳ್ಳು ಸುದ್ದಿಗಳೇ ಮೇಳೈಸುತ್ತಿದೆ. ಇಲ್ಲಿ ಸತ್ಯ ಎಂಬುದು ಬಲಿಪಶುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದದ್ದೇ ಸರಿ ಎಂದು ಜನ ನಿರ್ಧರಿಸಿ ಬಿಡುವ ಹಂತಕ್ಕೆ ಸುಳ್ಳು ಸುದ್ದಿಗಳು ಬೃಹದಾಕಾರವಾಗಿ ಬೆಳೆದಿದೆ ಎಂದರು.
ಜನ ತಮ್ಮದೇ ದೃಷ್ಟಿಕೋನಗಳನ್ನು ಸರಿಯೆಂದು ಯೋಚಿಸುತ್ತಾರೆ. ಭಿನ್ನ ದೃಷ್ಟಿಕೋನಗಳನ್ನು ಒಪ್ಪುವುದೇ ಇಲ್ಲ. ಒಂದು ವೇಳೆ ಭಿನ್ನ ಆಲೋಚನೆ ವ್ಯಕ್ತಪಡಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವ ಬೆದರಿಕೆಯನ್ನು ಎದುರಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ದುರದೃಷ್ಟವೆಂದರೆ ಇಂತಹ ಆತಂಕಗಳನ್ನು ಎದುರಿಸುತ್ತಿರುವವರಲ್ಲಿ ನ್ಯಾಯಾಧೀಶರೂ ಹೊರತಲ್ಲ. ಅಷ್ಟರ ಮಟ್ಟಿಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ನಮ್ಮನ್ನು ಬಂಧಿಸಿಟ್ಟಿವೆ ಎಂದವರು ಆತಂಕ ವ್ಯಕ್ತಪಡಿಸಿದರು.
ಮಾನವೀಯತೆಯನ್ನು ಜನ ಹಿಮ್ಮೆಟ್ಟಿಸಿದ್ದಾರೆ. ತಮ್ಮ ನಿಲುವು, ದೃಷ್ಟಿಕೋನಗಳಂತೆ ಇನ್ನೊಬ್ಬರ ನಿಲುವು ದೃಷ್ಟಿಕೋನಗಳಿರಬೇಕೆಂದು ಬಯಸುತ್ತಾರೆ. ಇನ್ನೊಬ್ಬ ವಿಭಿನ್ನವಾಗಿದ್ದರೆ ಅದನ್ನು ಸ್ವೀಕರಿಸಲು ನಮ್ಮ ಜನ ತಯಾರಿಲ್ಲ. ನಮ್ಮ ಕಾಲದ ಬಹುದೊಡ್ಡ ಸವಾಲಿದು. ತಂತ್ರಜ್ಞಾನದ ಕೊಡುಗೆ ಈ ಸವಾಲಿನಲ್ಲಿ ದೊಡ್ಡದಿದೆ ಎಂದುವರು ಅಭಿಪ್ರಾಯಪಟ್ಟರು.