ಬೆಂಗಳೂರು, ಮಾ 04 (DaijiworldNews/DB): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಬಿಜೆಪಿಯ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯೊಂದಿಗೆ ಸುಮಲತಾ ಬಿಜೆಪಿ ಸೇರ್ಪಡೆ ಕುರಿತ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಸುಮಲತಾ ಇಂದು ಭೇಟಿಯಾದರು. ಸುಮಲತಾ, ಎಸ್.ಎಂ. ಕೃಷ್ಣ ಭೇಟಿ ಬೆನ್ನಲ್ಲೇ ಸುಮಲತಾ ಬಿಜೆಪಿ ಸೇರ್ಪಡೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ಭೇಟಿ ಬಗ್ಗೆ ಸ್ಪಷ್ಟನೆ ನೀಡಿರುವ ಸುಮಲತಾ, ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಕಾರಣ ಅಭಿನಂದನೆ ಸಲ್ಲಿಸಲೆಂದು ಹೋಗಿದ್ದೆ. ರಾಜಕೀಯ ವಿಚಾರ ಚರ್ಚೆಯಾಗಿಲ್ಲ ಎಂದಿದ್ದಾರೆ.
ನಮ್ಮ ಜಿಲ್ಲೆಯ ಹಿರಿಯ ನಾಯಕರು ಅವರು. ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಹೀಗಾಗಿ ಅಭಿನಂದನೆ ಸಲ್ಲಿಸಲೆಂದು ಹೋಗಿದ್ದೆ. ರಾಜಕೀಯ ಮಾತನಾಡಿಲ್ಲ ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಬಿಜೆಪಿ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನನ್ನ ಲಾಭ ನಷ್ಟಕ್ಕಿಂತ ನನ್ನೊಂದಿಗೆ ಇರುವವರ ಬಗ್ಗೆ ನೋಡಿಕೊಂಡೇ ಯಾವುದೇ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಹೀಗಾಗಿ ಹಿರಿಯರು, ಹಿತೈಷಿಗಳು, ಬೆಂವಲಿಗರ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು.
ಮಾರ್ಚ್ 12ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಆಗಮಿಸಲಿದ್ದು, ಅಂದೇ ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ ಅಂದು ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದರು.