ದಾವಣಗೆರೆ, ಮಾ 04 (DaijiworldNews/DB): ಡಬಲ್ ಎಂಜಿನ್ ಸರ್ಕಾರ ಕರ್ನಾಟಕವನ್ನು ಲೂಟಿ ಮಾಡಿದೆಯೇ ಹೊರತು ಅಭಿವೃದ್ದಿಯಲ್ಲ. ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕರನ್ನು ಬಂಧಿಸದ ಬಿಜೆಪಿ ಸರ್ಕಾರಕ್ಕೆ ಪದ್ಮಭೂಷಣ ಪ್ರಶಸ್ತಿ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಕರ್ನಾಟಕ ಸರ್ಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಆಮ್ ಆದ್ಮಿ ಪಕ್ಷದ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿ. ನನ್ನ ಪುತ್ರನೇ ಆದರೂ ಭ್ರಷ್ಟಾಚಾರ ಎಸಗಿದವರನ್ನು ಬಿಡುವುದಿಲ್ಲ. ಯಾರೇ ಆದರೂ ಅವರನ್ನು ಜೈಲಿಗಟ್ಟಿ ಕಾನೂನು ಪ್ರಕಾರ ಶಿಕ್ಷೆ ನೀಡುತ್ತೇವೆ. ನಮ್ಮ ಬದ್ದತೆಯೇ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ಎಂದರು.
ಬಿಜೆಪಿಯದ್ದು ಕಮಿಷನ್ ಸರ್ಕಾರ. ಆದರೆ ಎಎಪಿಯದ್ದು ಶೂನ್ಯ ಕಮಿಷನ್ ಸರ್ಕಾರ. ಕರ್ನಾಟಕದ ಸಚಿವರುಗಳು ಶೇಕಡಾ 40ರಷ್ಟು ಕಮಿಷನ್ ಕೇಳುತ್ತಾರೆಂದು ಪ್ರಧಾನಿಗೆ ಪತ್ರ ಬರೆದರೂ ಲಂಚ ಕೇಳಿದವರನ್ನು ಬಂಧಿಸಿಲ್ಲ. ಅದರ ಬದಲಾಗಿ ಪತ್ರ ಬರೆದವರನ್ನೇ ಬಂಧಿಸುವ ಕೆಲಸ ನಡೆದಿದೆ. ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರೊಬ್ಬರ ಪುತ್ರನ ಮನೆಯಲ್ಲಿ ಎಂಟು ಕೋಟಿ ರೂ. ಪತ್ತೆಯಾಗಿದೆ. ಭ್ರಷ್ಟಾಚಾರ ನಿಗ್ರಹಿಸುತ್ತೇವೆಂದು ಹೇಳುತ್ತಿರುವ ಮೋದಿ ಮತ್ತು ಅಮಿತ್ ಶಾ ಅವರ ಪಕ್ಷದ ಶಾಸಕರ ಮಗನ ಬಳಿ ಇಷ್ಟು ಮೊತ್ತದ ಹಣ ಹೇಗೆ ಬಂತು? ಎಂದು ಪ್ರಶ್ನಿಸಿದ ಅವರು, ತಲೆಮರೆಸಿಕೊಂಡು ಓಡಾಡುತ್ತಿರುವ ಆ ಶಾಸಕರನ್ನು ಸರ್ಕಾರ ಇನ್ನೂ ಬಂಧಿಸಿಲ್ಲ. ಅಂತಹ ಸರ್ಕಾರಕ್ಕೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ವ್ಯಂಗ್ಯವಾಡಿದರು.
ನಾಗಾಲ್ಯಾಂಡ್, ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮೇಘಾಲಯದಲ್ಲಿ ಘಟಬಂಧನ್ ಸರ್ಕಾರ ರಚಿಸಿದೆ. ಈ ಮೂರೂ ರಾಜ್ಯಗಳಲ್ಲಿಯೂ ಎಎಪಿ ಸ್ಪರ್ಧಿಸಿರಲಿಲ್ಲ. ಆದರೆ ದೆಹಲಿಯಲ್ಲಿ ವಿಜಯೋತ್ಸವ ವೇಳೆ ಪ್ರಧಾನಿ ಮೋದಿ ಅವರು ಎಎಪಿಯ ಬಗ್ಗೆ ಮಾತನಾಡಿರುವುದು ಅವರಿಗೆ ನಮ್ಮ ಪಕ್ಷದ ಬಗ್ಗೆ ಇರುವ ಭಯವನ್ನು ಸೂಚಿಸುತ್ತದೆ ಎಂದು ಕೇಜ್ರೀವಾಲ್ ಲೇವಡಿ ಮಾಡಿದರು.