ಚಿಕ್ಕಮಗಳೂರು, ಮಾ 04 (DaijiworldNews/DB): ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಎಸ್ನವರ ಕುಟುಂಬದಲ್ಲಿ ಸದಸ್ಯರ ಕೊರತೆ ಇದೆ. ಇದೊಂದೆ ಆ ಪಕ್ಷದಲ್ಲಿರುವ ಸಮಸ್ಯೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಯುವ ಮೋರ್ಚಾ ಆಯೋಜನೆ ಮಾಡಿದ್ದ ಯುವ ಸಂಗಮದಲ್ಲಿ ಮಾತನಾಡಿದ ಅವರು, ನಮಗೆಲ್ಲಾ ಒಂದು ಪ್ರಜಾಪ್ರಭುತ್ವ. ಆದರೆ ಜೆಡಿಎಸ್ನವರಿಗೆ ಪ್ರಜಾಪ್ರಭುತ್ವದ ಅರ್ಥ ಬೇರೆ. ಅವರ ಪಕ್ಷದಲ್ಲಿ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬುದು ಪ್ರಜಾಪ್ರಭುತ್ವದ ಅರ್ಥ ಎಂದರು.
224 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವರ ಪಕ್ಷದಲ್ಲಿ ಕುಟುಂಬ ಸದಸ್ಯರ ಕೊರತೆ ಇದೆ. ಅದೇ ಅವರಲ್ಲಿರುವ ಸಮಸ್ಯೆಯೂ ಆಗಿದೆ. ಒಂದು ವೇಳೆ ಅಷ್ಟೂ ಜನ ಇದ್ದಿದ್ದರೆ ಅವರು ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿರಲಿಲ್ಲ. ಅವರ ಕುಟುಂಬ ಸದಸ್ಯರನ್ನೇ ಎಲ್ಲಾ ಕ್ಷೇತ್ರಗಳಲ್ಲಿ ನಿಲ್ಲಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಹಾಸನದಲ್ಲಿ ನಡೆಯುತ್ತಿರುವ ಅಭ್ಯರ್ಥಿ ತಿಕ್ಕಾಟ ದೇಶಕ್ಕಾಗಿಯೋ, ಹಾಸನಕ್ಕಾಗಿಯೋ ಅಲ್ಲ. ಬದಲಾಗಿ ಕುಟುಂಬಕ್ಕಾಗಿ ಅಲ್ಲಿ ಗಲಾಟೆ ನಡೆಯುತ್ತಿದೆ ಎಂದು ಕುಟುಕಿದರು.