ನವದೆಹಲಿ, ಮಾ 05 (DaijiworldNews/HR): ವಾರ್ಷಿಕ ವಿದ್ಯಾರ್ಥಿ ವೇತನದ ಮೂರನೆಯ ಕಂತನ್ನು ಬಿಡುಗಡೆ ಮಾಡಲು ನಿರಾಕರಿಸಿದ ಕಾರಣಕ್ಕೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರೂ. 50 ಸಾವಿರ ನ್ಯಾಯಾಲಯ ವೆಚ್ಚವನ್ನು ಎಂಟು ವಾರಗಳೊಳಗೆ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಪ್ರಾಯೋಜಿಸಲಾಗಿರುವ 'INSPIRE' ಯೋಜನೆಯಡಿಯಲ್ಲಿ ಬಿಡುಗಡೆ ಮಾಡಬೇಕಿದ್ದ ವಾರ್ಷಿಕ ವಿದ್ಯಾರ್ಥಿ ವೇತನದ ಮೂರನೆಯ ಕಂತನ್ನು ಬಿಡುಗಡೆ ಮಾಡಲು ನಿರಾಕರಿಸಿತ್ತು. ಇದಲ್ಲದೆ ವಿದ್ಯಾರ್ಥಿ ವೇತನದ ಮೂರನೆ ಕಂತಾದ ರೂ. 60,000 ಅನ್ನು ಶೇ. 6ರ ಬಡ್ಡಿಯೊಂದಿಗೆ ವಿದ್ಯಾರ್ಥಿಗೆ ಬಿಡುಗಡೆ ಮಾಡಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಲು ವಿದ್ಯಾರ್ಥಿಗಳು ಹನ್ನೆರಡನೆ ತರಗತಿ ಫಲಿತಾಂಶದಲ್ಲಿ ಕ್ರಮವಾಗಿ ತಮ್ಮ ಪರೀಕ್ಷಾ ಮಂಡಳಿಗಳಿಂದ ಪಡೆದಿರುವ ಮೊದಲ ಶ್ರೇಣಿಯ ಶೇ. 1ರಷ್ಟು ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿರಬೇಕು. ಈ ಪ್ರಕರಣದಲ್ಲಿ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ್ದ ವಿದ್ಯಾರ್ಥಿಗೆ ಮೊದಲೆರಡು ವರ್ಷ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ, ಮೂರನೆಯ ವರ್ಷ ತಡೆ ಹಿಡಿಯಲಾಗಿತ್ತು.
ಇನ್ನು ಈ ಯೋಜನೆಯಡಿ ಅರ್ಹತೆ ಪಡೆಯಬೇಕಾದರೆ ವಿದ್ಯಾರ್ಥಿಯ ಸಂಚಿತ ಶ್ರೇಣಿ ಸರಾಸರಿ ಅಂಕವು ಪ್ರಮುಖ ವಿಷಯಗಳಲ್ಲಿ 6.0 ಇರಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಆದರೆ ಕೇಂದ್ರ ಸರ್ಕಾರದ ಈ ನಿಲುವನ್ನು ತಿರಸ್ಕರಿಸಿ ವಿದ್ಯಾರ್ಥಿಗೆ ರೂ. 50 ಸಾವಿರ ನ್ಯಾಯಾಲಯ ವೆಚ್ಚವನ್ನು ಎಂಟು ವಾರಗಳೊಳಗೆ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.