ನವದೆಹಲಿ, ಮಾ 05 (DaijiworldNews/DB): ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬೆಂಬಲಿಸಿ ದೆಹಲಿ ಸರ್ಕಾರಿ ಶಾಲೆಯ ಗೇಟ್ನಲ್ಲಿ ಐ ಲವ್ ಮನೀಶ್ ಸಿಸೋಡಿಯಾ ಎಂದು ಪೋಸ್ಟರ್ ಅಳವಡಿಸಿದ ಘಟನೆ ನಡೆದಿದೆ. ಪೋಸ್ಟರ್ ಅಳವಡಿಸಿದ ವ್ಯಕ್ತಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈಶಾನ್ಯ ದೆಹಲಿಯ ಸರ್ಕಾರಿ ಶಾಲೆಯ ಮುಖ್ಯ ಗೇಟ್ನಲ್ಲಿ ಈ ಪೋಸ್ಟರ್ ಕಂಡು ಬಂದಿದೆ. ಪೋಸ್ಟರ್ನಲ್ಲಿ ಐ ಲವ್ ಮನೀಶ್ ಸಿಸೋಡಿಯಾ ಎಂದು ಬರೆಯಲಾಗಿದೆ. ಶಾಲಾ ಆಡಳಿತ ಸಮಿತಿಯ (ಎಸ್ಎಂಸಿ) ಸಂಯೋಜಕ ಪೋಸ್ಟರ್ ಅಂಟಿಸಿದ್ದು ಎಂದು ತಿಳಿದು ಬಂದಿದ್ದು, ಆತನ ವಿರುದ್ದ ಪೊಲೀಸರು ಆಸ್ತಿ ವಿರೂಪಗೊಳಿಸುವಿಕೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತ ಶುಕ್ರವಾರ ಬೆಳಗ್ಗೆ ಶಾಲೆಯ ಮುಖ್ಯ ಗೇಟ್ನಲ್ಲಿ ಪೋಸ್ಟರ್ ಅಳವಡಿಕೆ ಮಾಡುತ್ತಿದ್ದ ವೇಳೆ ಸ್ಥಳೀಯ ನಿವಾಸಿ ದಿವಾಕರ್ ಪಾಂಡೆ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
2021-22ರ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐಯು ಕಳೆದ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದಾದ ಬೆನ್ನಲ್ಲೇ ಮಂಗಳವಾರ ಸಿಸೋಡಿಯಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿಕ್ಷಣ ಸೇರಿದಂತೆ ದೆಹಲಿ ಸರ್ಕಾರದ 18 ಇಲಾಖೆಗಳ ಜವಾಬ್ದಾರಿ ಸಿಸೋಡಿಯಾ ಮೇಲಿತ್ತು.