ಹೈದರಾಬಾದ್, ಮಾ 05 (DaijiworldNews/DB): 20ಕ್ಕೂ ಅಧಿಕ ಕೋತಿಗಳ ಹಿಂಡೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ವೃದ್ದೆಯೊಬ್ಬರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟರಬೋಯಿನಾ ನರಸವ್ವ (70) ಮೃತಪಟ್ಟವರು. ವೃದ್ದೆ ತನ್ನ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾಗ 20ಕ್ಕೂ ಹೆಚ್ಚು ಮಂಗಗಳು ಆಕೆಯ ಮೇಲೆ ದಾಳಿ ನಡೆಸಿವೆ. ಮಂಗಗಳ ದಾಳಿ ವೇಳೆ ಆಕೆಯ ಕಿರಿ ಮಗಳು ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ವೃದ್ದೆ ಏಕಾಂಗಿಯಾಗಿ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಮಂಗಗಳ ದಾಳಿಯಿಂದ ರಕ್ಷಿಸಿಕೊಳ್ಳಲು ನರಸವ್ವ ಕೂಗಿಕೊಂಡರೂ ಭಯದಿಂದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರುವ ಪ್ರಯತ್ನ ಮಾಡಲಿಲ್ಲ. ಮಂಗಗಳ ಗುಂಪು ಅಲ್ಲಿಂದ ಚದುರುವ ತನಕ ಎಲ್ಲರೂ ಬಾಗಿಲು ಹಾಕಿಕೊಂಡು ಕುಳಿತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ವೃದ್ದೆಯ ಬೆನ್ನು, ಎದೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ವಲ್ಪ ಹೊತ್ತಿನ ನಂತರ ಆಕೆಯ ಮಗಳು ಸುಗುಣಾ ಮನೆಗೆ ಆಗಮಿಸಿದ್ದು, ಕೂಡಲೇ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನರಸವ್ವ ಶನಿವಾರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.