ತಮಿಳುನಾಡು, ಮಾ 05 (DaijiworldNews/DB): ದೇವಸ್ಥಾನದ ಉತ್ಸವದಲ್ಲಿ ಬೆಂಕಿಯ ನಡಿಗೆ ಆಚರಣೆ ವೇಳೆ ಕೆಂಡ ಹಾಯುವಾಗ ವ್ಯಕ್ತಿಯೊಬ್ಬ ಮುಗ್ಗರಿಸಿ ಬಿದ್ದು ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ಸಂಗಗಿರಿಯಲ್ಲಿ ನಡೆದಿದೆ.
ಅರಸಿರಾಮಣಿ ಕುಲ್ಲಂಪಟ್ಟಿಯ ಬತ್ರಕಾಳಿ ಅಮ್ಮನ್ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಈ ಘಟನೆ ನಡೆದಿದೆ. ಬರಿಗಾಲಿನಲ್ಲಿ ಕೆಂಡ ಹಾಯುವುದು ಇಲ್ಲಿನ ವಾರ್ಷಿಕ ಉತ್ಸವದ ವೇಳೆ ಪ್ರತಿ ವರ್ಷದ ಪದ್ದತಿ. ಇದನ್ನು ಪವಿತ್ರ ಎಂಬುದಾಗಿ ಪರಿಗಣಿಸಲಾಗಿದೆ. ದೇವಸ್ಥಾನದ ಅರ್ಚಕರು 'ಪುಂಕರಾಗಮ್' ಎಂಬ ಎರಡು ಮಡಕೆಗಳನ್ನು ಹೊತ್ತುಕೊಂಡು ಹೋಗುವುದರೊಂದಿಗೆ ಕೆಂಡ ಹಾಯುವ ಸೇವೆ ಆರಂಭವಾಗಿತ್ತು. ಒಬ್ಬರಾದ ಮೇಲೊಬ್ಬರು ಕೆಂಡದ ಮೇಲೆ ಭಕ್ತರು ನಡೆಯಲು ಪ್ರಾರಂಭಿಸಿದ ವೇಳೆ ಭಕ್ತನೊಬ್ಬ ಸಮತೋಲನ ಕಳೆದುಕೊಂಡು ಕೆಂಡದ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ.
ಕೆಂಡದ ಮೇಲೆ ಬಿದ್ದಾತನಿಗೆ ಎದ್ದೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇತರ ಭಕ್ತರು ಆತನನ್ನು ಹೊರಕ್ಕೆಳೆದು ಹಾಕಿದ್ದು ಬಳಿಕ ಕೂಡಲೇ ಆತನನ್ನು ಎಡಪಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿದ್ದ ಪರಿಣಾಮ ಆತನ ದೇಹದ ಮೇಲೆ ಹಲವಾರು ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.