ನವದೆಹಲಿ, ಮಾ 05 (DaijiworldNews/DB): ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ ಎಂಟು ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಮ್ಮ ವಿರುದ್ದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಪಕ್ಷ ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹಿತ ಎಂಟು ವಿಪಕ್ಷಗಳ ನಾಯಕರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ. ಆದರೆ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಸಹಿ ಮಾಡದೆ ಅಂತರ ಕಾಯ್ದುಕೊಂಡಿದ್ದಾರೆ.
ಭಾರತ ಎಂದೆಂದಿಗೂ ಪ್ರಜಾಸತ್ತಾತ್ಮಕ ದೇಶ. ಇದನ್ನು ನೀವು ಒಪ್ಪುತ್ತೀರೆಂದು ಭಾವಿಸುತ್ತೇವೆ. ಆದರೆ ಕಳೆದ ಕೆಲವು ವರ್ಷಗಳಿಂದ ವಿಪಕ್ಷಗಳ ವಿರುದ್ದದ ಅಸ್ತ್ರವಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಿಂದ ಸರ್ವಾಧಿಕಾರದತ್ತ ಹೊರಳುತ್ತಿದ್ದೇವೆ ಎಂಬ ಯೋಚನೆ ಉಂಟಾಗಿದೆ ಎಂದು ಪತ್ರದಲ್ಲಿ ಆಪಾದಿಸಲಾಗಿದೆ.