ಬೆಂಗಳೂರು, ಮಾ 05 (DaijiworldNews/DB): ರಾಜ್ಯದಲ್ಲಿ ಎಚ್3 ಎನ್2 ವೈರಸ್ ಈವರೆಗೆ ಕಂಡು ಬಂದಿಲ್ಲ. ಜನ ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಈ ವೈರಸ್ ಹರಡಿದ್ದರೂ, ಕರ್ನಾಟಕದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಆತಂಕ ಅನಗತ್ಯ. ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ವೈರಸ್ ರಾಜ್ಯಕ್ಕೆ ಕಾಲಿಡದಂತೆ ತಡೆಯುವುದು ಮತ್ತು ನಿಯಂತ್ರಣ ಕ್ರಮಗಳು, ಚಿಕಿತ್ಸೆ ಮುಂತಾದ ವಿಚಾರಗಳ ಬಗ್ಗೆ ನಾಳೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಲಾಗುವುದು ಎಂದವರು ತಿಳಿಸಿದರು.
ವೈರಸ್ ಬಾಧಿಸಿದವರಿಗೆ ದೀರ್ಘಕಾಲದ ಕೆಮ್ಮು ಇರಲಿದೆ ಎಂಬುದಾಗಿ ಮಾಹಿತಿಯಿದೆ. ಆದರೆ ಅಂತಹ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು. ವೈರಸ್ ಪತ್ತೆಯಾದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕ್ರಮ ಹೇಗಿರಬೇಕು ಎಂಬುದನ್ನು ಸಭೆಯ ಬಳಿಕ ಪ್ರಕಟಿಸಲಾಗುವುದು ಎಂದವರು ವಿವರಿಸಿದರು.