ಚಂಡೀಗಢ, ಮಾ 05 (DaijiworldNews/HR): ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ತರಬೇತಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ನೈನಾ ಕನ್ವಾಲ್ ಟ್ರೈನಿ ಎಸ್ಐ ಆಗಿ ರಾಜಸ್ಥಾನದಲ್ಲಿ ಕರ್ತವ್ಯದಲ್ಲಿದ್ದು, ದೆಹಲಿಯ ಪೊಲೀಸರು ಹರಿಯಾಣ ಪೊಲೀಸರ ಸಹಕಾರದೊಂದಿಗೆ ಇತ್ತೀಚೆಗೆ ನೈನಾ ಅವರ ರೋಹ್ಟಕ್ ಫ್ಲ್ಯಾಟ್ ವೊಂದಕ್ಕೆ ದಾಳಿ ಮಾಡಿದ್ದಾರೆ. ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸುಮಿತ್ ನಂದಲ್ ಎನ್ನುವ ಆರೋಪಿಯ ಹುಡುಕಾಟಕ್ಕೆ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಇನ್ನು ಈ ವೇಳೆ ಫ್ಲ್ಯಾಟ್ ನಲ್ಲಿದ್ದ ನೈನಾ ಕನ್ವಾಲ್ ಅವರ ಕೈಯಲ್ಲಿ ಪೊಲೀಸರು ಎರಡು ಪಿಸ್ತೂಲ್ ಗಳನ್ನು ನೋಡಿದ್ದು, ಪೊಲೀಸರನ್ನು ನೋಡಿದ ಬಳಿಕ ಕೈಯಲ್ಲಿದ್ದ ಪಿಸ್ತೂಲ್ ಗಳನ್ನು ನೈನಾ ಎಸೆಯಲು ಯತ್ನಿಸಿದ್ದಾರೆ. ಪೊಲೀಸರು ಅನುಮಾನಗೊಂಡು ಆಕೆಯನ್ನು ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ಆಕೆ ತರಬೇತಿಯಲ್ಲಿರುವ ರಾಜಸ್ಥಾನದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಎನ್ನುವುದು ತಿಳಿದಿದ್ದು, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ನೈನಾ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಲಾಗಿದೆ.