ಚಿಕ್ಕಮಗಳೂರು, ಮಾ 05 (DaijiworldNews/DB): ಬಿಜೆಪಿಯವರು ಭರವಸೆಗಳನ್ನು ಈಡೇರಿಸದೆ ಸುಳ್ಳಿನ ಸೌಧ ಕಟ್ಟುತ್ತಲೇ ಇದ್ದಾರೆ. ಸುಳ್ಳೇ ಅವರ ಮನೆ ದೇವರು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನ ಕೈಮರದಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಅವರು ವಿವಿಧ ಭರವಸೆಗಳನ್ನು ಜನರಿಗೆ ನೀಡಿದ್ದಾರೆ. ಆದರೆ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಸುಳ್ಳಿನ ಸೌಧ ಕಟ್ಟಿ, ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಳ್ಳುವುದು ಅವರಿಗೆ ಸಾಮಾನ್ಯವಾಗಿದೆ ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಕಳೆದ ಒಂಬತ್ತು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗವನ್ನೂ ನೀಡಿಲ್ಲ. ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಗಾಗಿ ಆಪಲ್ ಕಂಪೆನಿ ಸ್ಥಾಪಿಸುವುದಾಗಿ ಒಬ್ಬ ಸಚಿವರು ಹೇಳಿದ್ದಾರೆ. ಆದರೆ ಈ ಬಗ್ಗೆ ಆಪಲ್ ಕಂಪೆನಿಗೆ ಕೇಳಿದರೆ ಸುಳ್ಳು ಎನ್ನುತ್ತಿದೆ. ಈ ಸುಳ್ಳು ಹೇಳುವ ಗುಂಪಿನಲ್ಲಿ ಸಿ.ಟಿ. ರವಿ ಇದ್ದಾರೆ. ಅವರ ಗುಂಪಿನಲ್ಲಿ ಸಾಂಟ್ರೋ ರವಿ, ಬ್ರೋಕರ್ ರವಿ ಸೇರಿದಂತೆ ಇನ್ನೂ ಅನೇಕರಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಗೊತ್ತು ಗುರಿ ಇಲ್ಲದ ಆಡಳಿತದಿಂದ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಸಂಕಷ್ಟ ಹೇಳತೀರದಾಗಿದೆ. ಇದಕ್ಕಾಗಿಯೇ ಪ್ರತಿ ಕುಟುಂಬಕ್ಕೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್, ತಿಂಗಳಿಗೆ ಒಬ್ಬ ಯಜಮಾನಿಗೆ ಎರಡು ಸಾವಿರ ರೂ.ಗಳನ್ನು ಹಾಗೂ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ ಎಂದು ಬಿ.ಕೆ. ಹರಿಪ್ರಸಾದ್ ವಿವರಿಸಿದರು.