ಆಂಧ್ರಪ್ರದೇಶ, ಮಾ 05 (DaijiworldNews/DB): ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪಿ. ವೀರಬಾಬು (45) ಸಾವನ್ನಪ್ಪಿದ ಶಿಕ್ಷಕ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೆಟಪಾಲೆಂ ಮಂಡಲದ ವಕವರಿ ಪಾಲೆಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೀರಬಾಬು ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಕುಸಿದು ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಶಿಕ್ಷಕರು ಒಮ್ಮೆಲೇ ಕುಸಿದು ಬಿದ್ದಿದ್ದನ್ನು ನೋಡಿದ ವಿದ್ಯಾರ್ಥಿಗಳು ಇತರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಓಡಿ ಬಂದ ಇತರ ಶಿಕ್ಷಕರು ಕೂಡಲೇ ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಆಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು,ಅದರಲ್ಲಿದ್ದ ಆರೋಗ್ಯ ಕಾರ್ಯಕರ್ತರೊಬ್ಬರು ಶಿಕ್ಷಕನ ನಾಡಿಮಿಡಿತ ಪರಿಶೀಲಿಸಿದ್ದು, ಅವರು ಅದಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ. ಶಿಕ್ಷಕನ ಹಠಾತ್ ನಿಧನ ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದೆ.