ನವದೆಹಲಿ, ಮಾ 05 (DaijiworldNews/DB): ಸಿಬಿಐ ಕಸ್ಟಡಿಯಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸುಳ್ಳು ತಪ್ಪೊಪ್ಪಿಗೆಗೆ ಸಹಿ ಹಾಕಬೇಕೆಂದು ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ನಮಗೆ ಬಲವಾದ ಮಾಹಿತಿ ಲಭಿಸಿದೆ ಎಂದರು.
ಆರೋಪಗಳ ಪಟ್ಟಿಯನ್ನು ಲಿಖಿತವಾಗಿ ನಿಮಗೆ ನೀಡುತ್ತೇವೆ. ಅದಕ್ಕೆ ನೀವು ಸಹಿ ಹಾಕಬೇಕು ಎಂದು ಸಿಸೋಡಿಯಾ ಅವರ ಮೇಲೆ ಒತ್ತಡ ಹೇರುವ ಕೆಲಸವನ್ನು ಸಿಬಿಐ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದವರು ಆಪಾದಿಸಿದರು.
ಸಿಸೋಡಿಯಾ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದರೂ ಅವರ ವಿರುದ್ದ ಯಾವುದೇ ಸಾಕ್ಷ್ಯಗಳು ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಲ್ಲ. ಅದಕ್ಕಾಗಿಯೇ ಈ ರೀತಿಯ ಹಿಂಸೆ ನೀಡಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ದೆಹಲಿಯ ಮದ್ಯ ನೀತಿ ಹಗರಣ ಪ್ರಕರಣ ಸಂಬಂಧಿಸಿ ಕಳೆದ ಭಾನುವಾರ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದರು. ಬಳಿಕ ಮಂಗಳವಾರದಂದು ದೆಹಲಿ ಉಪಮುಖ್ಯಮಂತ್ರಿ ಸ್ಥಾನ ಸಹಿತ ಎಲ್ಲಾ ಜವಾಬ್ದಾರಿಗಳಿಗೆ ಸಿಸೋಡಿಯಾ ರಾಜೀನಾಮೆ ಸಲ್ಲಿಸಿದ್ದರು.