ಬೆಂಗಳೂರು, ಮಾ 06 (DaijiworldNews/MS):ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿ ಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ಪೊಲೀಸರು ಲುಕ್ ಔಟ್ ನೊಟೀಸ್ ಜಾರಿ ಮಾಡಲು ನಿರ್ಧರಿಸಿದ್ದಾರೆ.
ವಿರೂಪಾಕ್ಷಪ್ಪ ಅವರು ವಿದೇಶಕ್ಕೆ ಪರಾರಿಯಾಗಲು ಸಿದ್ದತೆ ನಡೆಸಿದ್ದು ಈ ಹಿನ್ನಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಿಗೆ ಅವರ ಬಗ್ಗೆ ಮಾಹಿತಿ ರವಾನಿಸಲು ತೀರ್ಮಾನಿಸಿದ್ದಾರೆ.
40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು
ಗುರುವಾರ ತಡ ರಾತ್ರಿ ಬೆಂಗಳೂರು ತಲುಪಿದ್ದ ವಿರೂಪಾಕ್ಷಪ್ಪ, ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ಹಲವು ತಂಡಗಳಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಪ್ರಶಾಂತ್ ಬಂಧಿತರಾಗಿದ್ದ ಖಾಸಗಿ ಕಚೇರಿಯಲ್ಲಿ ಇನ್ನೂ 1.62 ಕೋಟಿ ರೂ.ಲಂಚದ ಹಣ ವಶಕ್ಕೆ ಪಡೆಯಲಾಗಿತ್ತು. ವಿರೂಪಾಕ್ಷಪ್ಪ ಮನೆಯಲ್ಲಿ 6.10 ಕೋಟಿ ರೂ. ಪತ್ತೆಯಾಗಿತ್ತು. ಪ್ರಶಾಂತ್ ಬ್ಯಾಂಕ್ ಖಾತೆಗೆ 94 ಲಕ್ಷ ರೂ. ಜಮೆ ಆಗಿರುವುದಕ್ಕೆ ತನಿಖಾ ತಂಡ ದಾಖಲೆ ಪತ್ತೆ ಹಚ್ಚಿದೆ. ಈ ವಿಷಯಗಳು ಹಾಗೂ ಕೆಎಸ್ಡಿಎಲ್ನ ಟೆಂಡರ್ ಪ್ರಕ್ರಿಯೆ ಕುರಿತು ಶಾಸಕರನ್ನು ಪ್ರಶ್ನಿಸಲು ತನಿಖಾ ತಂಡ ಸಿದ್ಧತೆ ಮಾಡಿಕೊಂಡಿದೆ.