ನವದೆಹಲಿ, ಮಾ 06 (DaijiworldNews/HR): ಮಂಗಳೂರು ಹಾಗೂ ಕೊಯಮತ್ತೂರಿನಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವುದು ನಮ್ಮ ಉಗ್ರರೇ ಎಂಬ ಸ್ಫೋಟಕ ವಿಷಯವನ್ನು ಐಸಿಸ್ ಸಂಘಟನೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ವಿಲಾಯಾ ಖೋರಾಸಾನ್ ತನ್ನ ವಾಯ್ಸ್ ಆಫ್ ಖೋರಾಸಾನ್ ನಿಯತಕಾಲಿಕೆಯ 23ನೇ ಸಂಚಿಕೆಯಲ್ಲಿ, ಕಳೆದ ವರ್ಷ ಅ. 23ರಂದು ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಮತ್ತು ನ. 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಐಎಸ್ ಸಂಯೋಜಿತ ಉಗ್ರರು ನಡೆಸಿದ್ದರು ಎಂದು ನಿಯತಕಾಲಿಕೆಯಲ್ಲಿ ಉಲ್ಲೇಖಿಸಿದೆ.
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು ಭಯೋತ್ಪಾದನಾ ಕೃತ್ಯ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆ ಸಮಯದಲ್ಲೇ ಸ್ಪಷ್ಟಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು.