ನಾಗಪುರ, ಮಾ 06 (DaijiworldNews/MS): ಲೈಂಗಿಕ ಶೋಷಣೆಗೆ ಒಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಸೋಶಿಯಲ್ ಮಿಡಿಯಾದಲ್ಲಿ ಪರಿಚಿತವಾದ ವ್ಯಕ್ತಿಯೊಬ್ಬ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಶೋಷಣೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಕುಟುಂಬ ಸದಸ್ಯರಿಗೆ ಗೊತ್ತಾಗದಂತೆ ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು, ಆದರೆ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ತಿಳಿದಿರಲಿಲ್ಲ.
ಮಾ.3ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋವು ಕಾಣಿಸಿಕೊಂಡಿತ್ತು. ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಮತ್ತು ನಂತರ ನವಜಾತ ಶಿಶುವನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ. ಈ ವಿಚಾರ ಕುಟುಂಬಸ್ಥರಿಗೆ ತಿಳಿಯದ ಕಾರಣ ನವಜಾತ ಶಿಶುವಿನ ಮೃತದೇಹವನ್ನು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕಿ ಮನೆಯಲ್ಲೇ ಬಚ್ಚಿಟ್ಟಿದ್ದಳು.
ತಾಯಿ ಮನೆಗೆ ಬಂದು ತನ್ನ ಪುತ್ರಿಯ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿದಾಗ ಬಾಲಕಿ ಭಯದಿಂದ ಬಂದು ತನ್ನ ತಾಯಿಗೆ ಇಡೀ ಘಟನೆಯನ್ನು ಹೇಳಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ನವಜಾತ ಶಿಶುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅದೇ ವೇಳೆ ಅಪ್ರಾಪ್ತ ಬಾಲಕಿಯ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.