ಬೆಂಗಳೂರು, ಮಾ 06 (DaijiworldNews/MS): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಬಂಧನ ಭೀತಿ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲರು ಮನವಿ ಮಾಡಿದರು.
ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಪ್ರಶಾಂತ್ ಬಂಧಿತರಾಗಿದ್ದ ಖಾಸಗಿ ಕಚೇರಿಯಲ್ಲಿ ಇನ್ನೂ 1.62 ಕೋಟಿ ರೂ.ಲಂಚದ ಹಣ ವಶಕ್ಕೆ ಪಡೆಯಲಾಗಿತ್ತು. ವಿರೂಪಾಕ್ಷಪ್ಪ ಮನೆಯಲ್ಲಿ 6.10 ಕೋಟಿ ರೂ. ಪತ್ತೆಯಾಗಿತ್ತು. ಪ್ರಶಾಂತ್ ಬ್ಯಾಂಕ್ ಖಾತೆಗೆ 94 ಲಕ್ಷ ರೂ. ಜಮೆ ಆಗಿರುವುದಕ್ಕೆ ತನಿಖಾ ತಂಡ ದಾಖಲೆ ಪತ್ತೆ ಹಚ್ಚಿದ್ದು, ಅವರ ಬಂಧನಕ್ಕಾಗಿ ಲೋಕಾಯುಕ್ತ ಲುಕ್ ಔಟ್ ನೋಟಿಸ್ ಹೊರಡಿಸಿತ್ತು.