ಮೈಸೂರು, ಮಾ. 06 (DaijiworldNews/SM): ಶಿವಾಜಿ ಪ್ರತಿಮೆಯ ಕ್ರೆಡಿಟ್ ವಾರ್ ಬಳಿಕ ಇದೀಗ ಕಾಂಗ್ರೆಸ್ ಬಿಹೆಪಿ ನಡುವೆ ಮತ್ತೊಂದು ವಾರ್ ಶುರುವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ವಿಚಾರದಲ್ಲಿ ಕ್ರೆಡಿಟ್ ಕಾಂಗ್ರೆಸ್ ಗೆ ಸಿಗಬೇಕೆಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಮಾರ್ಚ್ 12ರಂದು ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಒಂದೊಮ್ಮೆ ಎಸ್ಪಿಜಿ ಅನುಮತಿ ಕೊಟ್ಟರೆ ಇದೇ ಹೈವೇಯಲ್ಲಿ ಮೋದಿ ರೋಡ್ ಶೋ ಕೂಡ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಕಾಂಗ್ರೆಸ್ ಹೈವೇ ಪರಿಶೀಲಿಸಲು ಮುಂದಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾಹಿತಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇದರಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದ ಯಾವ ಪಾತ್ರವೂ ಇಲ್ಲ. ಪ್ರತಾಪ್ ಸಿಂಹ ಕ್ಷೇತ್ರದ ವ್ಯಾಪ್ತಿಗೆ ಕೆಲವೇ ಕಲವು ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಾನು ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹೆಚ್.ಸಿ.ಮಹದೇವಪ್ಪಗೂ ಈ ರಸ್ತೆಯ ಎಲ್ಲಾ ಮಾಹಿತಿ ಗೊತ್ತಿದೆ. ಮಾ.9ರಂದು ಬೆಂಗಳೂರು-ಮೈಸೂರು ಹೈವೇ ಪರಿಶೀಲನೆ ಮಾಡುತ್ತೇವೆ ಎಂದರು.
ದಶಪಥ ರಸ್ತೆಯ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ನಮ್ಮಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣಗೊಂಡಿದೆ. ವಿನಾಕಾರಣ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. 2 ತಿಂಗಳ ಕಾಯಿರಿ, ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ. ಅವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗುತ್ತಾರೆ. ನಂತರ ಅವರು ಪ್ರವಾಸ ಮಾಡಲಿ. ಮಕ್ಕಳು, ಮೊಮ್ಮಕ್ಕಳ ಜತೆ ಬೆಂಗಳೂರು-ಮೈಸೂರು ಟ್ರಿಪ್ ಮಾಡಲಿ ಎಂದರು.