ಬೆಂಗಳೂರು, ಮಾ 07 (DaijiworldNews/HR): ಮಾ.24 ರಂದು ಸಾರಿಗೆ ನಿಗಮ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ನಡೆಯಲಿದ್ದು ಧರಣಿ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ನೀಡಲಿದ್ದಾರೆ.
ಸರ್ಕಾರಿ ನೌಕರರ ನಂತರ ಇದೀಗ ಸಾರಿಗೆ ನೌಕರರು ಮುಷ್ಕರಕ್ಕೆ ನಿರ್ಧರಿಸಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಕೂಟ ಈಗಾಗಲೇ ಎರಡು ಬಾರಿ ಮುಷ್ಕರ ಮಾಡಿದ್ದು, ನಾಲ್ಕು ದಿನ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು.
ಆರನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು, ಮುಷ್ಕರದ ಸಮಯದಲ್ಲಿ ಮಾಡಿರೋ ವಜಾ, ಅಮಾನತು, ಪೋಲಿಸ್ ಕೇಸ್ ಹಿಂಪಡಿಬೇಕು, 1 ಲಕ್ಷ 7 ಸಾವಿರ ನೌಕರರ ಸಂಘಕ್ಕೆ 23 ವರ್ಷಗಳಿಂದ ಚುನಾವಣೆ ಆಗಿಲ್ಲ, ಚುನಾವಣೆ ನಡೆಸಬೇಕು, ಈ ಬಾರಿ ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಲು ಒತ್ತಾಯ, ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ವಿರೋಧ, ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆ ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕಕ್ಕೆ ವಿರೋಧ ಇವೆಲ್ಲವೂ ಸಾರಿಗೆ ನೌಕರರ ಬೇಡಿಕೆಯಾಗಿದೆ.