ನವದೆಹಲಿ, ಮಾ 07 (DaijiworldNews/DB): ದೇಶದಲ್ಲಿ ವಾಡಿಕೆಗಿಂತ ಮೊದಲೇ ತಾಪಮಾನದಲ್ಲಿ ಅತಿಯಾದ ಏರಿಕೆಯಾಗಿರುವುದರಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಲ್ನಿನೊ (ಪೆಸಿಫಿಕ್ ಸಾಗರದ ಮೇಲ್ಮೈಯಲ್ಲಿನ ತಾಪಮಾನದಲ್ಲಿ ಆಗುವ ಬದಲಾವಣೆ) ಪರಿಣಾಮದಿಂದಾಗಿ ಮುಂಗಾರು ದುರ್ಬಲಗೊಂಡಿದೆ. ಇದರಿಂದ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಮೇಲೆಯೂ ಪರಿಣಾಮ ಬೀರಲಿದೆ. ವಾಡಿಕೆಗಿಂತ ಮೊದಲೇ ತಾಪಮಾನದಲ್ಲಿ ದಿನೇದಿನೇ ಏರಿಕೆಯಾಗುತ್ತಿದ್ದು, ಬಿಸಿಲಿಗೆ ಜನ ಬಸವಳಿಯುತ್ತಿದ್ದಾರೆ ಈ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರಬೇಕು ಎಂದವರು ನಿರ್ದೇಶನ ನೀಡಿದ್ದಾರೆ.
ಆಹಾರ ಧಾನ್ಯಗಳನ್ನು ಈಗಿಂದಲೇ ಶೇಖರಿಸಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ತೊಂದರೆಯಾಗದಂತೆ ಈಗಿಂದಲೇ ಕ್ರಮ ವಹಿಸಬೇಕು ಎಂದು ಭಾರತೀಯ ಆಹಾರ ನಿಗಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ಹವಾಮಾನ ವರದಿಯನ್ನು ಕಡ್ಡಾಯವಾಗಿ ಪ್ರತಿದಿನ ಸಿದ್ದಪಡಿಸಿ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆಗೆ ನಿರ್ದೇಶಿಸಿದ್ದಾರೆ.
ವೈದ್ಯಕೀಯ ಸಿಬಂದಿ, ನಗರಸಭೆ, ಪುರಸಭೆ, ಪಂಚಾಯತ್, ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬಂದಿ ಪ್ರತ್ಯೇಕವಾಗಿ ಸಿದ್ದಗೊಳ್ಳಬೇಕು. ಜಾಗೃತಿ ಪರಿಕರಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಯಾವುದೇ ಅವಘಡಗಳು ಉಂಟಾದರೂ ಎದುರಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸನ್ನದ್ದವಾಗಿರಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.