ಕೊಲ್ಕತ್ತಾ, ಮಾ 07 (DaijiworldNews/HR): ಪ್ರತಿಭಟನಾಕಾರರು ನನ್ನ ತಲೆ ಕತ್ತರಿಸಿದರೂ ತುಟ್ಟಿಭತ್ಯೆ ಹೆಚ್ಚಳ ಅಸಾಧ್ಯ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ಸಮಾನವಾಗಿ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಕುರಿತು ಮಾತನಾಡಿದ ಅವರು, ಟಿಎಂಸಿ ಸರ್ಕಾರ ರಾಜ್ಯದಲ್ಲಿ ಶೇಕಡ 105ರಷ್ಟು ತುಟ್ಟಿಭತ್ಯೆ ನೀಡುತ್ತಿದೆ. ನಿಮಗೆ ಎಷ್ಟು ಬೇಕು? ನಿಮಗೆ ತೃಪ್ತಿಯಾಗುವುದು ಯಾವಾಗ? ದಯವಿಟ್ಟು ನನ್ನ ತಲೆ ಕಡಿಯಿರಿ. ಬಹುಶಃ ಆಗ ನಿಮಗೆ ಸಮಾಧಾನವಾಗಬಹುದು. ನೀವು ನನ್ನನ್ನು ಇಷ್ಟಪಡದಿದ್ದಲ್ಲಿ, ನನ್ನ ತಲೆ ಕತ್ತರಿಸಿ. ಆದರೂ ನನ್ನಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ ಎಂದರು.
ಇನ್ನು ವಿವಿಧ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಕೇಂದ್ರ ಸರ್ಕಾರ ಘೋಷಿಸಿರುವ ತುಟ್ಟಿಭತ್ಯೆಗೆ ಸಮಾನವಾದ ತುಟ್ಟಿಭತ್ಯೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ.