ಬೆಂಗಳೂರು, ಮಾ 07 (DaijiworldNews/DB): ಮೇಲ್ಜಾತಿ ಹಾಗೂ ಶ್ರೀಮಂತ ವರ್ಗಕ್ಕೆ ಮೀಸಲಾಗಿರುವ ಪಕ್ಷ ಬಿಜೆಪಿ. ಅವರು ಕೆಳ ವರ್ಗ, ನಾಡಿನ ಅಭಿವೃದ್ದಿ ವಿಚಾರವಾಗಿ ಚಿಂತನೆಯೇ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಬಲದ ಮೂಲಕ ಅಧಿಕಾರಕ್ಕೇರುವ ತವಕ ಅವರದು. ಅವರ ಬಳಿ ಲಂಚದ ಹಣ ಟನ್ಗಟ್ಟಲೆ ಇದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಅಭಿವೃದ್ದಿ ಮಾಡದೇ ಕೇವಲ ಲೂಟಿ ಮಾಡಿರುವುದೇ ಅವರ ಸಾಧನೆಯಾಗಿದೆ ಎಂದರು.
ಭ್ರಷ್ಟಾಚಾರ ಆರೋಪ ಮಾಡಿದಾಗ ದಾಖಲೆ ನೀಡಿ ಎಂದು ಸಿಎಂ ಕೇಲುತ್ತಿದ್ದರು. ಆದರೆ ಈಗ ಮಾಡಾಳ್ ವಿರೂಪಾಕ್ಷ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರಲ್ಲ. ಮುಖ್ಯಮಂತ್ರಿಯವರಿಗೆ ಇನ್ನೂ ಏನು ದಾಖಲೆ ಬೇಕಿದೆ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದ ಮೂಲಕ 40 ಪರ್ಸೆಂಟ್ ಕಮಿಷನ್ ಆರೋಪ ಸಾಬೀತಾಗಿದೆ. ಒಂದು ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೈತಿಕತೆ ಇರುವುದೇ ಆದಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಆಡಳಿತದಲ್ಲಿ ಎಸಿಬಿ ರಚನೆಗಾಗಿ ಲೋಕಾಯುಕ್ತ ಮುಚ್ಚಿದ್ದಾರೆಂದು ಬಿಜೆಪಿಯವರು ಆರೋಪಿಸಿದ್ದಾರೆ. ಆದರೆ ನಾವು ಲೋಕಾಯುಕ್ತವನ್ನು ಮುಚ್ಚಿಲ್ಲ. ಭ್ರಷ್ಟರ ವಿರುದ್ದದ ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿಯಾಗಲಿಎಂಬ ಕಾರಣಕ್ಕೆ ಎಸಿಬಿ ರಚನೆ ಮಾಡಿದ್ದೆವು. ಜ್ಞಾನ ಇಲ್ಲದವರು ಮಾತ್ರ ನಮ್ಮ ವಿರುದ್ದ ಆರೋಪ ಮಾಡುತ್ತಾರೆ ಎಂದು ಹರಿಹಾಯ್ದರು.
ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸಿಬಿ ಇದೆ. ಕರ್ನಾಟಕದಲ್ಲಿ ಮೂರು ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಯವರು ಎಸಿಬಿ ರದ್ದು ಮಾಡಿಲ್ಲ. ಯಾಕೆಂದರೆ ಅದರ ಅವಶ್ಯಕತೆ ಅವರಿಗೂ ಇದೆ ಎಂದು ಇದೇ ವೇಳೆ ಬಿಜೆಪಿಗೆ ಟಾಂಗ್ ನೀಡಿದರು.