ಬೆಂಗಳೂರು, ಮಾ 07 (DaijiworldNews/MS): ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ನಟ ಚೇತನ್ ಅಹಿಂಸಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ರಾಹುಲ್ ಗಾಂಧಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಕೂಡಾ ಟೀಕೆಗೆ ಗುರಿಯಾಗಿದೆ.
ಸಾಗರದಲ್ಲಿ ಸೋಮವಾರ ಮಾತನಾಡಿದ್ದ ಕಟೀಲ್ , ಕೊವೀಡ್ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಸಿದ್ದರಾಮಯ್ಯ ಜನರಿಗೆ ತಪ್ಪು ಮಾಹಿತಿಢರಡಿದ್ದರು. ಆದರೂ, ಕಾಂಗ್ರೆಸ್ ನಾಯಕರು ಕೊರೊನಾಕ್ಕೆ ಹೆದರಿ ಬಳಿಕ ಲಸಿಕೆ ಹಾಕಿಸಿಕೊಂಡರು. ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂಬ ಸಿದ್ದರಾಮಯ್ಯ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು.
ಇದೇ ವಿಚಾರದ ಈ ಕುರಿತು ಟ್ವೀಟ್ ಮಾಡಿರುವ ನಟ ಚೇತನ್, ಮಕ್ಕಳಾಗದ ಕಾರಣ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ ಎಂದು ಬಿಜೆಪಿ ಸಂಸದ ಕಟೀಲ್ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಕೆಳಮಟ್ಟದ್ದು ಮತ್ತು ತಾರ್ಕಿಕವಾಗಿ ದೋಷಪೂರಿತ ಹೇಳಿಕೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರು ಪುರುಷನಿಗಿಂತ ಕಡಿಮೆ ಎಂದು ಬಿಂಬಿಸುವ ಪುರುಷ ಪ್ರಧಾನದ ಪ್ರಚೋದನೆಯು ಹಿಮ್ಮೆಟಿಸುವಿಕೆ ಮತ್ತು ಅನುಚಿತವಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಕಟೀಲ್ ಅವರಿಗೆ ಚೇತನ್ ಪ್ರಶ್ನೆಯೊಂದು ಹಾಕಿದ್ದು, "ಮಕ್ಕಳನ್ನು ಹೊಂದಲೆಂದೇ ಮದುವೆಯಾಗಬೇಕೇ" ಎಂದು ಕೇಳಿದ್ದಾರೆ.