ನವದೆಹಲಿ, ಮಾ 07 (DaijiworldNews/DB): ಟ್ರಾಫಿಕ್ ಸಿಗ್ನಲ್ನಲ್ಲಿ ಬೈಕ್ ನಿಲ್ಲಿಸಿದ್ದಾಗ ದರೋಡೆಕೋರರ ತಂಡವೊಂದು ಬೈಕ್ ಸವಾರನ ಬ್ಯಾಗ್ನಿಂದ 40 ಲಕ್ಷ ರೂ. ಎಗರಿಸಿ ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಕೆಂಪು ಕೋಟೆ ಬಳಿ ಟ್ರಾಫಿಕ್ ಸಿಗ್ನಲ್ ಬಿದ್ದ ಹಿನ್ನೆಲೆಯಲ್ಲಿ ಬೈಕ್ ಸವಾರ ಬೈಕ್ ನಿಲ್ಲಿಸಿದ್ದ. ಈ ವೇಳೆ ಮೂವರು ದರೋಡೆಕೋರರು ಬೈಕ್ ಸವಾರ ಬೆನ್ನಿಗೆ ಹಾಕಿಕೊಂಡ ಬ್ಯಾಗ್ನಿಂದ 40 ಲಕ್ಷ ರೂ.ಗಳನ್ನು ಕದ್ದಿದ್ದಾರೆ. ದರೋಡೆಕೋರರು ಹಣ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೈಕ್ ಎರಡು ಕಾರುಗಳ ನಡುವೆ ನಿಂತಿದ್ದ ವೇಳೆ ಮೂವರು ದರೋಡೆಕೋರರು ಬೈಕ್ನತ್ತ ಬಂದಿದ್ದು, ಕೂಡಲೇ ಬ್ಯಾಗ್ನ ಜಿಪ್ ತೆಗೆದು ಹಣ ಎಗರಿಸಿ ಪರಾರಿಯಾಗಿದ್ದಾರೆ. ಬೈಕ್ ಸವಾರಿನಿಗೆ ಇದು ತಿಳಿದಿರಲಿಲ್ಲ. ಸದ್ಯ ಮೂವರ ಪೈಕಿ ಆಕಾಶ್ ಮತ್ತು ಅಭಿಷೇಕ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 38 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.