ನವದೆಹಲಿ, ಮಾ 07 (DaijiworldNews/DB): ವಿದೇಶೀ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯನ್ನು ಅವಮಾನಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದಾಗಿ ಲಂಡನ್ನಲ್ಲಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಕಿಡಿ ಕಾರಿರುವ ಅವರು, ಭಾರತದ ರಾಜಕೀಯ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂಸತ್ತು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಅವಮಾನ ಮಾಡಿದ್ದಾರೆ. ರಾಹುಲ್ ಹೇಳಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೆ ನೀಡುವ ರಾಹುಲ್ ಗಾಂಧಿಯವರಿಗೆ ನಾಚಿಕೆಯಾಗಬೇಕು. ಅವರ ಪ್ರಕಾರ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಯುರೋಪ್ ಮತ್ತು ಯುಎಸ್ ಮಧ್ಯಪ್ರವೇಶಿಸಬೇಕೆಂದೇ? ಎಂದವರು ಪ್ರಶ್ನಿಸಿದರು.
ನಮ್ಮ ದೇಶದ ವ್ಯವಸ್ಥೆ ಕುರಿತು ವಿದೇಶೀ ನೆಲದಲ್ಲಿ ದೂರುವುದು ಸಲ್ಲ. ಅದು ಯಾವ ಸರ್ಕಾರವಾದರೂ ಸರಿ. ಇಂತಹ ಮಾತುಗಳನ್ನು ವಿದೇಶೀ ನೆಲದಲ್ಲಿ ಆಡುವುದು ಅಕ್ಷಮ್ಯ. ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಬೇರೆ ರಾಷ್ಟ್ರಗಳ ಮಧ್ಯಪ್ರವೇಶದ ಬಗ್ಗೆ ಕೇಳಿಕೊಳ್ಳುವುದು ಬಹುದೊಡ್ಡ ತಪ್ಪು ಎಂದವರು ರಾಹುಲ್ ವಿರುದ್ದ ಹರಿಹಾಯ್ದರು.
ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ನ ಚುನಾಯಿತ ಅಧ್ಯಕ್ಷರೆಂದು ಭಾವಿಸಿದ್ದೇ ಆದಲ್ಲಿ ಭಾರತದ ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಅಮೆರಿಕ ಮತ್ತು ಯುರೋಪ್ ಮಧ್ಯಪ್ರವೇಶಿಸಬೇಕೆಂಬ ರಾಹುಲ್ ಹೇಳಿಕೆಯನ್ನು ಬೆಂಬಲಿಸುತ್ತೀರಾ? ಈ ಸಂಬಂಧ ನಿಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.