ಹಾಸನ, ಮಾ 07 (DaijiworldNews/DB): ಹಸು ಸಾಕಿ ಡೈರಿಗೆ ಹಾಲು ಹಾಕಿ ಬಂದ ಹಣವನ್ನು ಕೆಲವು ಗಂಡಸರು ಮದ್ಯಪಾನಕ್ಕೆ ಉಪಯೋಗಿಸುತ್ತಾರೆ. ಅಂತಹ ಪತಿಯಂದಿರಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ (ಭೇದಿ ಮಾತ್ರೆ) ಹಾಕಿ ನೀಡಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಕಿದ್ದಾರೆ.
ಹಾಸನ ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ 157 ಕೋಟಿ ರೂ ವೆಚ್ಚದ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪತ್ನಿಯ ದುಡಿತದ ಹಣದಲ್ಲಿ ಪತಿ ಮದ್ಯಪಾನ ಸೇವಿಸುವುದು ಸಲ್ಲ. ಅಂತಹ ಪತಿಯಂದಿರಿಗೆ ಪತ್ನಿಯರು ಹಾಲಿನಲ್ಲಿ ಜಾಪಾಳ ಮಾತ್ರೆ ಸೇರಿಸಿ ನೀಡಿ. ಮತ್ತೆಂದೂ ಅವರು ಕುಡಿಯಲು ಹೋಗುವುದಿಲ್ಲ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರ ಮನವಿ ಮೇರೆಗೆ ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗಿತ್ತು. ಆದರೆ ಈಗ ಏನಾಗಿದೆ ಎಂಬುದು ನಿಮಗೆ ಗೊತ್ತೇ ಇದೆ. ಅಲ್ಲದೆ ಈಗ ಬೆಲೆಯೂ ಜಾಸ್ತಿ ಆಗಿರುವುದರಿಂದ ದುಡಿತದ ಹಣವನ್ನೆಲ್ಲಾ ಸಾರಾಯಿ ಕುಡಿಯಲು ವ್ಯಯಿಸುತ್ತಿರುವುದು ದುರಾದೃಷ್ಟ ಎಂದವರು ಆತಂಕ ವ್ಯಕ್ತಪಡಿಸಿದರು.
ಯಾವ ಪೆಟ್ಟಿಗೆ ಅಂಗಡಿಗೆ ಹೋದರೂ ಬಾರ್ನಲ್ಲಿ ಸಿಗುವಂತೆಯೇ ಅಲ್ಲಿಯೂ ಸಾರಾಯಿ ಸಿಗುತ್ತಿದೆ. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಆ ಸಾರಾಯಿ ಕುಡಿಯುವುದನ್ನು ನಿಲ್ಲಿಸಿ, ಮಕ್ಕಳಿಗೆ ಓದಿಸಿ. ನಾಲ್ಕು ಜನರ ಮುಂದೆ ನಿಮ್ಮ ಮಕ್ಕಳು ತಲೆ ಎತ್ತಿ ನಿಲ್ಲುವಂತೆ ಮಾಡಬೇಕೇ ಹೊರತು ನಿಮ್ಮ ಕುಡಿತದ ಚಟದಿಂದ ಅವರು ತಲೆ ತಗ್ಗಿಸುವಂತೆ ಮಾಡಬೇಡಿ ಎಂದು ಇದೇ ವೇಳೆ ಅವರು ಸಲಹೆ ಮಾಡಿದರು.