ಉತ್ತರಪ್ರದೇಶ, ಮಾ 07 (DaijiworldNews/DB): ಐವರು ಮಕ್ಕಳನ್ನು ಹೊಂದಿರುವ ವೃದ್ದರೊಬ್ಬರು ತನ್ನ 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಕುಟುಂಬದ ಯಾರೊಬ್ಬರೂ ತಮ್ಮನ್ನು ನೋಡಲು ಬಾರದ್ದಕ್ಕೆ ನೊಂದು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಜಾಫರ್ನಗರದ ನಿವಾಸಿ ನಾಥು ಸಿಂಗ್ ಅವರೇ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟವರು. ಐವರು ಮಕ್ಕಳ ಪೈಕಿ ಪುತ್ರ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರೆ, ನಾಲ್ವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಪತ್ನಿ ಸಾವನ್ನಪ್ಪಿದ ಬಳಿಕ ನಾಥ ಸಿಂಗ್ ಒಂಟಿ ಜೀವನ ನಡೆಸುತ್ತಿದ್ದು, ಏಳು ತಿಂಗಳ ಕಾಲ ಗ್ರಾಮದ ವೃದ್ದಾಶ್ರಮದಲ್ಲಿ ವಾಸವಾಗಿದ್ದರು.
ಆದರೆ ಐವರು ಮಕ್ಕಳಲ್ಲಿ ಯಾರೊಬ್ಬರೂ ಸಿಂಗ್ ಅವರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸುತ್ತಿರಲಿಲ್ಲ. ಇದರಿಂದ ಅವರು ತುಂಬಾ ನೋವನುಭವಿಸುತ್ತಿದ್ದರು. ಇದೇ ಕಾರಣದಿಂದ ತಮ್ಮ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ.
ಇದೇ ವೇಳೆ ತಮ್ಮ ದೇಹವನ್ನು ಕೂಡಾ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಐವರು ಮಕ್ಕಳೂ ತಮ್ಮ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳದಿರುವಂತೆ ಆಸ್ತಿಯನ್ನು ವಿಲ್ ಮಾಡಿದ್ದಾರೆ. ತಮ್ಮ ಮರಣಾನಂತರ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ ಎಂದು ವೃದ್ದಾಧ್ರಮದ ಮ್ಯಾನೇಜರ್ ರೇಖಾ ಸಿಂಗ್ ಹೇಳಿದ್ದಾರೆ.