ಬೆಂಗಳೂರು, ಮಾ 08 (DaijiworldNews/MS): 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಾಳೆಯಿಂದ ಅಂದರೆ ಮಾರ್ಚ್ 9ರಿಂದ ಆರಂಭವಾಗಲಿದೆ. ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.
ಇನ್ನೂ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಲವು ನಿಯಮ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳು ಕೊಠಡಿ ಮೇಲ್ವೆಚಾರ ಸಿಬ್ಬಂದಿಗಳು ಮೊಬೈಲ್ ಫೋನ್/ಇತರೆ ವಿದ್ಯುನ್ಮಾನ ಆಧುನಿಕ ಉಪಕರಣಗಳ ಬಳಕೆ ನಿಷೇಧಿಸಿದೆ. ಕೊಠಡಿ ಒಳಗೆ ಯಾರೂ ವಿದ್ಯುನ್ಮಾನ ಉಪಕರಣಗಳನ್ನು ತಗೆದುಕೊಂಡು ಹೋಗುವಂತಿಲ್ಲ ಹಾಗೂ ಪರೀಕ್ಷಾ ಕೇಂದ್ರ ಆವರಣದಲ್ಲಿ ಅನಾವಶ್ಯಕ ಓಡಾಟ ಪರೀಕ್ಷೆ ಕಾರ್ಯಕ್ಕೆ ಸಂಬಂಧಿಸದೆ ಇರುವ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧವಿದೆ.
ಇನ್ನು ಈ ಬಾರಿ 7,27,387 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ನಡೆಯುವ ರಾಜ್ಯದ 1,109 ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹಿಂದೆ ನಕಲು ಮಾಡಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಕಣ್ಗಾವಲು ಇರಿಸಲಾಗಿದೆ. ಜಾಲತಾಣಗಳಲ್ಲಿ ವದಂತಿ ಹಬ್ಬಿಸದಂತೆ, ವದಂತಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ಮೇಲೆ ನಿಗಾ ಇರಿಸಲು ಸೈಬರ್ ಕ್ರೈಂ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು, ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಬಸ್ ಸೌಲಭ್ಯವನ್ನು ಪಡೆಯಬಹುದಾಗಿದೆ.