ಚೆನ್ನೈ, ಮಾ 08 (DaijiworldNews/HR): ತಮಿಳುನಾಡಿನ ಬಿಜೆಪಿಯಿಂದ 13 ಮಂದಿ ಕಾರ್ಯಕರ್ತರು ಪಕ್ಷ ತೊರೆದಿದ್ದು, ಬಿಜೆಪಿ ಮಿತ್ರ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸೇರಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ತನ್ನ ನಾಯಕರನ್ನು ಬೇಟೆಯಾಡುತ್ತಿದೆ ಎಂದು ಬಿಜೆಪಿಯ ರಾಜ್ಯ ಘಟಕವು ಆರೋಪಿಸುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ಇನ್ನು ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಹೊರಿಸಿ ಪಕ್ಷ ತೊರೆದ ಬಿಜೆಪಿ ರಾಜ್ಯ ಐಟಿ ವಿಭಾಗದ ಮುಖ್ಯಸ್ಥ ನಿರ್ಮಲ್ ಕುಮಾರ್ ಎಐಎಡಿಎಂಕೆಗೆ ನಿರ್ಗಮಿಸಿದ ಕೆಲವೇ ದಿನಗಳಲ್ಲಿ ಇದು ನಡೆದಿದೆ.
ಬಿಜೆಪಿ 10 ಐಟಿ ವಿಂಗ್ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಇಬ್ಬರು ಐಟಿ ವಿಂಗ್ ಜಿಲ್ಲಾ ಉಪ ಕಾರ್ಯದರ್ಶಿಗಳ ಸಹಿಯನ್ನು ಹೊಂದಿದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮಂಗಳವಾರ ಬಿಜೆಪಿ ಬೌದ್ಧಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಕೃಷ್ಣನ್, ಐಟಿ ವಿಭಾಗದ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್, ತಿರುಚ್ಚಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ವಿಜಯ್ ಮತ್ತು ರಾಜ್ಯ ಒಬಿಸಿ ವಿಭಾಗದ ಕಾರ್ಯದರ್ಶಿ ಅಮ್ಮು ಅವರು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾದ ನಂತರ ಎಐಎಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.