ಚನ್ನರಾಯಪಟ್ಟಣ, ಮಾ 09 (DaijiworldNews/MS): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜಾಮೀನು ದೊರೆತ ಮೇಲೆ ಯುದ್ದ ಗೆದ್ದು ಬಂದಂತೆ ಸಾರ್ವಜನಿಕ ಮೆರವಣಿಗೆ ಮಾಡಿರುವುದು ಸರಿಯಲ್ಲ. ಇದು ನಮಗೂ ಮುಜುಗರ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಲ್ಲಿ ಪಕ್ಷ ರಕ್ಷಣೆ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ. ಇಂತಹ ಯಾವುದೇ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಮಾಡಾಳ್ಗೆ ಜಾಮೀನು ಸಿಕ್ಕಿರುವುದು ಕಾನೂನಾತ್ಮಕ ವಿಚಾರ. ನಾನು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕರ್ನಾಟಕದಲ್ಲಿಯೂ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಅಧಿಕಾರ ಹಿಡಿದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ ಎಂದು ವ್ಯಂಗ್ಯವಾಡಿದರು.