ಮುಂಬೈ, ಮಾ 09 (DaijiworldNews/DB): ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಡುವ ವಂಚಕಿಯೊಬ್ಬಳ ಮಾತನ್ನು ನಂಬಿ ಬಾಲಕಿಯೊಬ್ಬಳು ತಂದೆಯ ಖಾತೆಯಿಂದ 55 ಸಾವಿರ ರೂ. ಕಳುಹಿಸಿ ವಂಚನೆಗೊಳಗಾಗಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.
ಮುಂಬೈಯ ಪೂರ್ವ ಗೋರೆಂಗಾವ್ ಮೂಲದ 16 ವರ್ಷದ ಬಾಲಕಿ ವಂಚನೆಗೊಳಗಾದವಳು. ತಂದೆಯ ಮೊಬೈಲ್ ನಲ್ಲಿ ಇನ್ ಸ್ಟಾಗ್ರಾಂ ಖಾತೆ ತೆರೆದಿದ್ದ ಆಕೆಗೆ ಸೋನಾಲಿ ಸಿಂಗ್ ಎಂಬಾಕೆಯಿಂದ ಫಾಲೋ ರಿಕ್ವೆಸ್ಟ್ ಬಂದಿತ್ತು. ಆ ರಿಕ್ವೆಸ್ ಸ್ವೀಕರಿಸಿದ ಬಾಲಕಿಯೊಂದಿಗೆ ಆಕೆ ಚಾಟ್ ಮಾಡುತ್ತಾ ಅಧಿಕ ಫಾಲೋವರ್ಸ್ ಮಾಡಿಕೊಡುವುದಾಗಿ ಹೇಳಿದ್ದಾಳೆ. ಯುವತಿ ಮಾತನ್ನು ನಂಬಿದ ಬಾಲಕಿ ಆಕೆ ಹೇಳಿದಂತೆ ಕೇಳಿದ್ದಾಳೆ. 50 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಬೇಕಾದರೆ 6 ಸಾವಿರ ರೂ. ನೀಡಬೇಕು ಎಂದಿದ್ದಾಳೆ. ಆದರೆ ತನ್ನಲ್ಲಿರುವ 600 ರೂ.ಗಳನ್ನು ಗೂಗಲ್ ಪೇ ಸ್ಕ್ಯಾನರ್ ಮೂಲಕ ಬಾಲಕಿ ಆಕೆಗೆ ಕಳುಹಿಸಿದ್ದು, ಇದರಿಂದ 10 ಸಾವಿರ ಫಾಲೋವರ್ಸ್ ಮಾತ್ರ ಸಿಗುತ್ತಾರೆ ಎಂಬುದಾಗಿ ಆಕೆ ಹೇಳಿದ್ದಾಳೆ. ಆದರೆ ಫಾಲೋವರ್ಸ್ ಬಾರದೇ ಇದ್ದುದನ್ನು ನೋಡಿದ ಬಾಲಕಿ ಆ ಹಣವನ್ನು ವಾಪಾಸ್ ಕೇಳಿದ್ದಾಳೆ.
ಆದರೆ ಆ ಯುವತಿ ಈಕೆಯಲ್ಲಿರುವ ಎಲ್ಲಾ ಹಣವನ್ನು ನೀಡಿದರೆ 600 ರೂ. ಸಹಿತ ಎಲ್ಲಾ ಹಣವನ್ನು ವಾಪಾಸ್ ನೀಡುವುದಾಗಿ ಹೇಳಿದ್ದಾಳೆ. ಹೀಗಾಗಿ ಬಾಲಕಿ ಎಂಟು ಬಾರಿ ಹಂತ ಹಂತವಾಗಿ ತಂದೆಯ ಖಾತೆಯಿಂದ ಒಟ್ಟು 55128 ರೂ.ಗಳನ್ನು ಸೋನಾಲಿಗೆ ಕಳುಹಿಸಿದ್ದಾಳೆ.
ಆದರೆ ಫಾಲೋವರ್ಸ್ ಸಂಖ್ಯೆ ಮಾತ್ರ ಹೆಚ್ಚಾಗದೇ ಇದ್ದಾಗ ಆಕೆ ಹಣವನ್ನು ಮರಳಿ ಕೇಳಿದ್ದಾಳೆ. ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಸದ್ಯ ವಾಫಾಸ್ ಕಳುಹಿಸಲು ಆಗುವುದಿಲ್ಲ ಎಂದು ವಂಚಕಿ ಹೇಳಿದ್ದಾಳೆ. ಇತ್ತ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ನಾಪತ್ತೆಯಾಗಿರುವ ವಿಚಾರ ತಂದೆಗೆ ಗೊತ್ತಾಗಿದ್ದು, ವಿಚಾರಿಸಿದಾಗ ನಿಜ ಘಟನೆಯನ್ನು ಮಗಳು ಬಾಯ್ಬಿಟ್ಟಿದ್ದಾಳೆ. ಇದೀಗ ಅವರು ಸೈಬರ್ ಠಾಣೆಗೆ ದೂರು ನೀಡಿದ್ದು, ಯುಪಿಐ ಐಡಿ ಮೂಲಕ ಆರೋಪಿ ಸೊನಾಲಿ ಪತ್ತೆಗೆ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.