ನವದೆಹಲಿ, ಮಾ 09 (DaijiworldNews/DB): ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತಿಹಾರ್ ಜೈಲ್ನಲ್ಲಿಂದು ಅಧಿಕಾರಿಗಳು ಎರಡನೇ ಸುತ್ತಿನ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳೀಯ ನ್ಯಾಯಾಲಯದಿಂದ ಇಡಿಯು ಈ ವಿಚಾರಣೆಗಾಗಿ ಅನುಮತಿ ಪಡೆದುಕೊಂಡಿದೆ. ಮಾರ್ಚ್ 7ರಂದು 5 ಗಂಟೆಗೂ ಹೆಚ್ಚು ಕಾಲ ಜೈಲಿನಲ್ಲೇ ಸಿಸೋಡಿಯಾ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಮತ್ತೆ ಇಂದು ಎರಡನೇ ಸುತ್ತಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಸೆಲ್ ನಂಬರ್ 1ರಲ್ಲಿ ಸಿಸೋಡಿಯಾ ಅವರ ವಿಚಾರಣೆ ನಡೆಯುತ್ತಿದೆ. ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾದ ಆರೋಪಗಳ ಕುರಿತು ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
2021-22ರ ದೆಹಲಿ ಮದ್ಯ ನೀತಿಯ ರಚನೆ ಹಾಗೂ ಅನುಷ್ಠಾನದ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಕಳೆದ ಫೆಬ್ರವರಿ 26ರಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಸಿಸೋಡಿಯಾ ಅವರನ್ನು ಬಂಧಿಸಿದ್ದರು.