ನವದೆಹಲಿ, ಮಾ 09 (DaijiworldNews/DB): ಚುನಾವಣೆ ಯಾವ ರಾಜ್ಯದಲ್ಲಿ ನಡೆಯುತ್ತದೆಯೋ ಆ ರಾಜ್ಯಕ್ಕೆ ಪ್ರಧಾನಿ ಮೋದಿಗಿಂತ ಮೊದಲೇ ತನಿಖಾ ಸಂಸ್ಥೆಗಳು ತಲುಪುತ್ತವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್ಎಸ್ ನಾಯಕಿ ಕೆ.ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಆದರೆ ಕಳೆದ ಜೂನ್ನಿಂದಲೇ ರಾಜ್ಯಕ್ಕೆ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಕಳುಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಹರಿಹಾಯ್ದರು.
ಯಾವ ರಾಜ್ಯದಲ್ಲಿ ಚುನಾವಣೆ ಇದೆ ಎಂಬುದು ಗೊತ್ತಾಗುತ್ತದೆಯೋ ಆ ರಾಜ್ಯಕ್ಕೆ ತನಿಖಾ ಸಂಸ್ಥೆಗಳು ಪ್ರಧಾನಿ ಮೋದಿಗಿಂತ ಮೊದಲೇ ಎಂಟ್ರಿಯಾಗುತ್ತವೆ. ಕೇಂದ್ರ ಸರ್ಕಾರ ಅಂತಹ ರಾಜ್ಯಗಳಿಗೆ ತನಿಖಾ ಸಂಸ್ಥೆಗಳನ್ನು ಕಳುಹಿಸಿಕೊಡುತ್ತಿದೆ ಎಂದರು.
ದೆಹಲಿ ಮದ್ಯ ನೀತಿ ಪ್ರಕರಣದ ವಿಚಾರಣೆ ಸಲುವಾಗಿ ಜಾರಿ ನಿರ್ದೇಶನಾಲಯವು ತಮಗೆ ಸಮನ್ಸ್ ನೀಡಿದ್ದು, ದೆಹಲಿಯಲ್ಲಿರುವ ಇಡಿ ಕಚೇರಿಗೆ ಮಾರ್ಚ್ 11ರಂದು ವಿಚಾರಣೆಗೆ ಹಾಜರಾಗುತ್ತೇನೆ. ಧರಣಿಯನ್ನು ರದ್ದುಗೊಳಿಸಿ ವಿಚಾರಣೆಗೆ ಹೋಗಬಹುದಿತ್ತು. ಆದರೆ ಕೇಂದ್ರದ ತಂತ್ರಕ್ಕೆ ನಾವು ಭೀತಿಗೊಳಗಾಗುವುದಿಲ್ಲ ಎಂಬ ಸಂದೇಶವನ್ನು ಅವರಿಗೆ ರವಾನಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.