ಭೋಪಾಲ್, ಮಾ 09 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಹೋಗಿ ಮಗುವಿನಂತೆ ಅತ್ತಿದ್ದಾರೆ. ಅವರ ಈ ಅಳು ಕಾಂಗ್ರೆಸ್ ನಾಯಕತ್ವದ ಸೋಲು ಮತ್ತು ಹತಾಶ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ವಿದೇಶದಲ್ಲಿ ಹೋಗಿ ನಮ್ಮ ದೇಶದ ಬಗ್ಗೆ ಅವರು ದೂರುವುದನ್ನು ನೋಡಿದರೆ ಆ ಪಕ್ಷದ ನಾಯಕತ್ವದ ಬಗ್ಗೆಯೇ ನನಗೆ ಕರುಣೆ ಉಂಟಾಗುತ್ತಿದೆ. ನಾಯಕತ್ವದ ಸೋಲಿನ ಸ್ಪಷ್ಟ ಚಿತ್ರಣ ರಾಹುಲ್ ಮಾತಿನಲ್ಲಿ ಎದ್ದು ಕಾಣುತ್ತಿದೆ. ಹತಾಶ ಮನಸ್ಥಿತಿ ಇದ್ದರಷ್ಟೇ ಇಂತಹ ಮಾತುಗಳನ್ನಾಡಲು ಸಾಧ್ಯ ಎಂದವರು ಹರಿಹಾಯ್ದರು.
ದೇಶದಲ್ಲಿ ರಾಹುಲ್ ಮಾತನ್ನು ಯಾರೂ ಕೇಳುವುದಿಲ್ಲವೆಂದು ವಿದೇಶಕ್ಕೆ ಹೋಗಿ ಮಾತನಾಡುತ್ತಿದ್ದಾರೆ. ದೇಶವೇ ನಾಚಿಕೆಪಡುವಂತ ಮಾತು ಅವರದು. ಅವರಿಗೆ ಏನಾದರೂ ಹೇಳಬೇಕೆಂದಿದ್ದರೆ ಅದನ್ನು ದೇಶದ ಜನರ ಬಳಿ ಹೇಳಬೇಕಿತ್ತೇ ಹೊರತು ವಿದೇಶೀ ನೆಲದಲ್ಲಿ ಅಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಮನಮೋಹನ್ ಸಿಂಗ್ ಪರಧಾನಿಯಾಗಿದ್ದಾಗ ನಾನು ವಿದೇಶಕ್ಕೆ ಹೋಗಿದ್ದ ವೇಳೆ ಮನಮೋಹನ್ ಸಿಂಗ್ ಕಳಪೆ ಸಾಧನೆಯನ್ನು ನನ್ನಲ್ಲಿ ಪ್ರಶ್ನಿಸಿದ್ದರು. ಆದರೆ ನಾನು ಅವರ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ ಎಂದೇ ಹೇಳಿದ್ದೆ. ಅವರು ನಮ್ಮ ದೇಶದ ಪ್ರಧಾನಿ, ಒಂದು ಪಕ್ಷದ ಪ್ರತಿನಿಧಿಯಲ್ಲ ಎಂದಿದ್ದೆ. ಆದರೆ ಈಗ ರಾಹುಲ್ ಗಾಂಧಿಯವರು ವಿದೇಶದಲ್ಲಿ ಹೋಗಿ ಅಳುತ್ತಿರುವುದು ನೋಡಿದರೆ ಅವರ ಹತಾಶ ಮನಸ್ಥಿತಿ ನೋಡಿ ದುಃಖವಾಗುತ್ತಿದೆ ಎಂದರು.