ಹುಬ್ಬಳ್ಳಿ, ಮಾ 10 (DaijiworldNews/DB): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಗೆ 65 ಸ್ಥಾನ ಬರುತ್ತದೆ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಕಾಂಗ್ರೆಸ್ಗೆ ಬರುವ ಸ್ಥಾನಗಳವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ನನ್ನ ಅಭಿವೃದ್ದಿ ಕಾರ್ಯಗಳಿಂದಾಗಿ ರಾಜ್ಯದ ಜನರು ಇನ್ನೊಮ್ಮೆ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ಕಾಂಗ್ರೆಸ್ಗೆ ಬರುವ ಸ್ಥಾನಗಳನ್ನು ಬಾಯ್ತಪ್ಪಿ ಡಿಕೆಶಿಯವರು ಬಿಜೆಪಿ ಎಂದು ಹೇಳಿದ್ದಾರೆ ಎಂದರು.
ಬಿಜೆಪಿಯಲ್ಲಿ ಎಲ್ಲರಿಗೂ ಟಿಕೆಟ್ ಸಿಗುತ್ತದೆ ಎಂದಾಗಲೀ, ಟಿಕೆಟ್ ಸಿಗುವುದಿಲ್ಲ ಎಂದಾಗಲೀ ಹೇಳಲಾಗದು. ಟಿಕೆಟ್ ನೀಡಿಕೆ ಕುರಿತಂತೆ ಸಮೀಕ್ಷೆಗಳು ನಡೆಯಲಿವೆ. ಎದುರಾಳಿ ಅಭ್ಯರ್ಥಿ, ಗೆಲ್ಲುವ ಸಾಮರ್ಥ್ಯ, ಕ್ಷೇತ್ರದ ಜನರ ಅನಿಸಿಕೆಗಳ ಮೇಲೆ ಟಿಕೆಟ್ ನೀಡುವ ಪ್ರಕ್ರಿಯೆ ನಿರ್ಧಾರವಾಗಲಿದೆ ಎಂದವರು ತಿಳಿಸಿದರು.
ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಕಷ್ಟ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಅವರ ಅನುಭವದ ಮೇಲೆ ಅಥವಾ ಕೆಲವು ಮಾಹಿತಿಗಳನ್ನಾಧರಿಸಿ ಹೇಳಿರಬಹುದು. ಅವರ ಹೇಳಿಕೆಯನ್ನು ನಾವು ಗೌರವಿಸುತ್ತೇವೆ ಎಂದರು.
ಕಳೆದೈದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಅಭಿವೃದ್ದಿ ಕಾರ್ಯಗಳಿಗೆ ಸಾಕಷ್ಟು ಹಣ ನೀಡಿದ್ದಾರೆ. ಅದರಿಂದಲೇ ಅವರು ರಾಜ್ಯಕ್ಕೆ ಬಂದಾಗ ಅಭಿವೃದ್ದಿ ಯೋಜನೆಗಳ ಲೋಕಾರ್ಪಣೆ, ಭೂಮಿಪೂಜೆಗಳು ನಡೆಯುತ್ತಿವೆ ಎಂದು ಪ್ರತಿಕ್ರಿಯಿಸಿದರು.