ರಾಜ್ಗಢ (ಮಧ್ಯಪ್ರದೇಶ), ಮಾ 10 (DaijiworldNews/DB): ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಯಾಣಿಸುತ್ತಿದ್ದ ಎಸ್ಯುವಿ ಕಾರು ಮೋಟಾರ್ ಸೈಕಲ್ಗೆ ಢಿಕ್ಕಿಯಾಗಿ ಯುವಕನೊಬ್ಬ ಗಾಯಗೊಂಡ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ನಡೆದಿದೆ.
ರಾಂಬಾಬು ಬಗ್ರಿ (20) ಗಾಯಗೊಂಡ ಯುವಕ. ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಕಾಶ್ ಪುರೋಹಿತ್ ಅವರ ತಾಯಿಯ ಅಂತಿಮ ದರ್ಶನ ಪಡೆದು ರಾಜ್ಗಢಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ ಸವಾರ ಒಮ್ಮೆಲೆ ಬೈಕ್ ತಿರುಗಿಸಿದ್ದು, ಈ ವೇಳೆ ವೇಗವಾಗಿ ಬರುತ್ತಿದ್ದ ಸಿಂಗ್ ಅವರ ಕಾರು ಬೈಕ್ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಯುವಕ ಕಂಬಕ್ಕೆ ಬಡಿದಿದ್ದು, ಕೆಳಕ್ಕೆ ಬಿದ್ದಿದ್ದಾನೆ. ಕೂಡಲೇ ಕಾರಿನಿಂದ ಇಳಿದ ದಿಗ್ವಿಜಯ್ ಸಿಂಗ್ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರು.
ಯುವಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಭೋಪಾಲ್ಗೆ ಸ್ಥಳಾಂತರ ಮಾಡಲಾಗಿದೆ. ಆತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಆತ ಭೋಪಾಲ್ನ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾತ್ರಿ ವೇಳೆ ಸಿಂಗ್ ಅವರು ಗಾಯಾಳು ಯುವಕನನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿರಾಪುರ ಪೊಲೀಸ್ ಠಾಣೆ ಪ್ರಭಾರಿ ಮುಖೇಶ್ ಗೌಡ್ ತಿಳಿಸಿದ್ದಾರೆ.