ಬೆಂಗಳೂರು, ಮಾ 10 (DaijiworldNews/DB): ದೇಶಾದ್ಯಂತ ಆತಂಕಕ್ಕೆ ಕಾರಣವಾಗಿರುವ ಎಚ್3ಎನ್2 ವೈರಸ್ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಹಾಸನ ಮೂಲದ ವೃದ್ದರೊಬ್ಬರು ವೈರಸ್ನಿಂದಾಗಿ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಆಲೂರಿನ 78 ವರ್ಷದ ವೃದ್ಧ ಸಾವನ್ನಪ್ಪಿದವರು. ಇವರು ಎಚ್3ಎನ್2 ವೈರಸ್ನಿಂದಾಗಿಯೇ ಮೃತಪಟ್ಟಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.
ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ ವೃದ್ದ ಮಾರ್ಚ್ 1 ರಂದು ಆಲೂರಿನಲ್ಲಿ ಸಾವನ್ನಪ್ಪಿದ್ದಾರೆ. ಮೃತ ವೃದ್ದನ ಗ್ರಾಮದಲ್ಲಿ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಲಕ್ಷಣ ಕಂಡು ಬಂದವರ ಗಂಟಲ ದ್ರವವನ್ನು ತಪಾಸಣೆಗೆ ಲ್ಯಾಬ್ಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನು ರಾಜ್ಯದಲ್ಲಿ ಈವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಹಾಸನದಲ್ಲಿ ಆರು ಮಂದಿಗೆ ವೈರಸ್ ತಗುಲಿರುವುದು ದೃಢಪಟ್ಟಿದೆ. 60 ವರ್ಷ ಮೇಲ್ಪಟ್ಟವರ ಮೇಲೆ ಹೆಚ್ಚಿನ ನಿಗಾ ಇಡಲು ಆರೋಗ್ಯ ಇಲಾಖೆ ಎಲ್ಲಾ ಸಿಬಂದಿಗೆ ಸೂಚನೆ ನೀಡಿದೆ.
ಕೋವಿಡ್ನ ಭೀತಿ ನಿಧಾನಕ್ಕೆ ಕಡಿಮೆಯಾಗುತ್ತಿದ್ದಂತೆ ಇದೀಗ ಎಚ್3ಎನ್2 ವೈರಸ್ ಹರಡುವ ಆತಂಕ ರಾಜ್ಯದಲ್ಲಿ ಹೆಚ್ಚಾಗಿದೆ. ಹೀಗಾಗಿ ಯಾರೂ ಕೂಡಾ ಜ್ವರ, ಚಳಿ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆ ಪಡೆದುಕೊಳ್ಳದೆ ವೈದ್ಯರಲ್ಲಿಗೆ ಭೇಟಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 5ರಿಂದ 7 ದಿನಗಳವರೆಗೆ ಈ ಸೋಂಕು ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ದರಿಗೆ ಶೀಘ್ರ ಹರಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಅವರು ವಿವರಿಸಿದ್ದಾರೆ.